ಭೋಜ್‌ಪುರ: ಪೊಲೀಸ್ ಠಾಣೆಯ ಚಾಲಕ ಮಹಿಳಾ ಕಾನ್ಸ್ಟೇಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕೊಯಿಲ್ವಾರ್ ಎಂಬಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವರದಿ ಕೇಳಿದ್ದಾರೆ ಎನ್ನಲಾಗಿದೆ.
ಕೊಯಿಲ್ವಾರ್ ಪೊಲೀಸ್ ಠಾಣೆಯ ಚಾಲಕ ಅತೀಶ್ ಕುಮಾರ್ ಎಂಬಾತ, ಇತರೆ ಪೊಲೀಸರ ಎದುರಲ್ಲೇ ಮಹಿಳಾ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: VIDEO | ಬಾಲಕನನ್ನು ತಿಂದ ಮೊಸಳೆಯ ಜೀವ ತೆಗೆದ ಜನರು!
ಶಮೀಮ್ ಅಹಮದ್ ಎಂಬಾತ ತನ್ನ ಮನೆ ಮುಂದೆ ಅನಧಿಕೃತವಾಗಿ ಮನೆ ಕಟ್ಟಿದ್ದಾನೆ ಎಂದು ಆರೋಪಿಸಿ ಮೆರಾಜ್ ಎಂಬಾತ ಠಾಣೆ ಮೆಟ್ಟಿಲೇರಿದ್ದ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿದ್ದ ಜನರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:
ಈ ವೇಳೆ ಪೊಲೀಸ್ ವಾಹನದ ಚಾಲಕ ಅಲ್ಲಿದ್ದ ಜನರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದನ್ನು ಸ್ಥಳೀಯರು ವಿಡಿಯೋ ಮಾಡಲು ಆರಂಭಿಸಿದಾಗ ಮೊಬೈಲ್ ಕಿತ್ತುಕೊಂಡಿದ್ದಾನೆ. ಇದೇ ವೇಳೆ ಮಹಿಳಾ ಕಾನ್ಸ್ಟೇಬಲ್ ಚಾಲಕನಲ್ಲಿ ಸುಮ್ಮನಿರುವಂತೆ ಕೇಳಿಕೊಳ್ಳಲು ಯತ್ನಿಸಿದಾಗ, ಎಲ್ಲರ ಮುಂದೆಯೇ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅಲ್ಲಿದ್ದ ಇತರೆ ಪೊಲೀಸರು ಚಾಲಕನನ್ನು ತಡೆದಿದ್ದಾರೆ ಎಂದು ವರದಿಯಾಗಿದೆ.
ಕೊಯಿಲ್ವಾರ್ ಠಾಣೆ ಅಧಿಕಾರಿ ಅವಿನಾಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೂರು ಸ್ವೀಕರಿಸಿದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಜನರೊಂದಿಗೆ ಮಾತಿನ ಚಕಮಕಿ ನಡೆದಿದೆ. ಚಾಲಕನನ್ನು ಹಿಂದಿನಿಂದ ತಡೆಯುತ್ತಿರುವುದು ಮಹಿಳಾ ಕಾನ್‌ಸ್ಟೆಬಲ್ ಎಂಬುದು ಗೊತ್ತಾಗದೆ ಹಲ್ಲೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)