ನ್ಯೂಸ್

ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ವಿಡಿಯೋ ಕಾಲ್ ಪರಿಶೀಲಿಸಲು ಮೊಬೈಲ್ ವಶಕ್ಕೆ ಪಡೆದ ಪೊಲೀಸರು!

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸೆಕ್ಸ್ ಸಿ.ಡಿ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೊಬೈಲ್ ಫೋನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಸೆಕ್ಸ್ ಸಿ.ಡಿ.ಯಲ್ಲಿದ್ದ ಯುವತಿಯ ಜೊತೆ ಮಾಜಿ ಸಚಿವರು ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ಕೂಡ ಈ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಯುವತಿಯ ಜತೆಗಿನ ಸಂಪರ್ಕ-ಸಂಬಂಧದ ಕುರಿತು ಪ್ರಶ್ನಿಸಲು ಇತ್ತೀಚೆಗೆ ಎರಡು ಬಾರಿ ಎಸ್‌ಐಟಿ ಪೊಲೀಸರು ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ಸಂದರ್ಭದಲ್ಲಿ, ಯುವತಿಯ ಜತೆಗಿನ ವಿಡಿಯೋ ಕಾಲ್ ಕುರಿತು ಪ್ರಶ್ನಿಸಿದಾಗ, ಮಾಜಿ ಸಚಿವರು ಸಮರ್ಪಕ ಉತ್ತರ ನೀಡಿರಲಿಲ್ಲ. ‘‘ನನಗೆ ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಅನ್ನೇ ಸರಿಯಾಗಿ ಉಪಯೋಗಿಸಲು ಬರುವುದಿಲ್ಲ... ಇನ್ನು ವಿಡಿಯೋ ಕಾಲ್ ಎಲ್ಲಿಂದ ಮಾಡಲಿ’’ ಎಂದು ಉತ್ತರಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮೊಬೈಲ್ ಫೋನನ್ನು ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಪರಿಶೀಲಿಸಿದ್ದಾರೆ. ನಂತರ ಅದರಲ್ಲಿರುವ ಡೇಟಾ ಕೂಡ ರಿಟ್ರೀವ್ ಮಾಡಲು ಮುಂದಾಗಿದ್ದಾರೆ. ಅಗತ್ಯ ಬಿದ್ದರೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳಿಸಿ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿರುವ ಜಾರಕಿಹೊಳಿ ಅವರಿಗೆ ಪೊಲೀಸರ ಈ ಕ್ರಮ ಮತ್ತಷ್ಟು ಮುಜುಗರ ಉಂಟು ಮಾಡುವ ಸಾಧ್ಯತೆ ಎಂದು ಹೇಳಲಾಗಿದೆ.