ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಜೈಲು ಸೇರಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್ಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ದರ್ಶನ್ ಮತ್ತು ಸಹಚರರು ಜೈಲಿನಲ್ಲಿ ದಿನ ದೂಡುತ್ತಿರುವ ನಡುವೆಯೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರಕರಣದ ಕುರಿತಂತೆ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಯಾನಂದ್, ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು, ಅನೇಕ ಮೌಖಿಕ, ಸಾಂಧರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಶೇ. 70ರಷ್ಟು ವರದಿ ನಮ್ಮ ಕೈ ಸೇರಿವೆ.
ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ಎಸ್ಎಲ್ ಗೆ ಕಳಿಸಲಾಗಿದ್ದು ಕೆಲ ದಿನಗಳ ಒಳಗಾಘಿ ವರದಿಗಳು ನಮ್ಮ ಕೈ ಸೇರಲಿವೆ. ವರದಿ ಕೈ ಸೇರಿದ ನಂತರ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆದು ಆ ನಂತರ ನ್ಯಾಯಾಲಯಕ್ಕೆ ಚಾರ್ಜ್ಶೀಟನ್ನು ಸಲ್ಲಿಸಲಾಗುವುದು. ನಮ್ಮ ಕಡೆಯಿಂದ ತಪ್ಪಾಗುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ನಂತರ ಕೋರ್ಟ್ ವಿಚಾರಣೆ ಆರಂಭಿಸಲಿದೆ. ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಮಾಹಿತಿ ಆಧರಿಸಿ ಆರೋಪಿಯ ಕೈವಾಡ, ಪ್ರಕರಣದ ಗಾಂಭೀರ್ಯತೆಯನ್ನು ಆಧರಿಸಿ ಬೇಲ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.