ನ್ಯೂಸ್

ಸುಳಿವು ಕೊಟ್ಟ ಇನ್ನೊಂದು ಫೋನ್‌: ಪೊಲೀಸರ ವಶಕ್ಕೆ ಡ್ರೋನ್‌ ಪ್ರತಾಪ್‌

suchetana

ಬೆಂಗಳೂರು: ವಿಜ್ಞಾನಿ ಎಂದು ಹೇಳಿಕೊಂಡು, ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳನ್ನು, ಮಾಧ್ಯಮಗಳನ್ನು ಯಾಮಾರಿಸಿ ತಲೆಮರೆಸಿಕೊಂಡಿದ್ದ ಮಂಡ್ಯದ ಯುವಕ ಡ್ರೋನ್‌ ಪ್ರತಾಪ್‌ನನ್ನು ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿ ನಿಯಮದ ಪ್ರಕಾರ, ಕ್ವಾರಂಟೈನ್​ನಲ್ಲಿರಬೇಕಿದ್ದ ಪ್ರತಾಪ್, ಎಲ್ಲ ನಿಯಮಗಳನ್ನು ಮೀರಿ ಖಾಸಗಿ ಚಾನೆಲ್‌ ಒಂದಕ್ಕೆ ಸಂದರ್ಶನ ಕೊಡಲು ಹೋಗಿ ಪೇಚಿಗೆ ಸಿಲುಕಿದ್ದ. ನಂತರ ಪೊಲೀಸರು ಎಲ್ಲಿ ಹುಡುಕಿದರೂ ಆತ ಸಿಕ್ಕಿರಲಿಲ್ಲ. ನಂತರ ಆತ ಮೈಸೂರಿನಲ್ಲಿ ಇರುವುದು ತಿಳಿದುಬಂದಿತ್ತು.

ಅಷ್ಟಕ್ಕೂ ಈತನ ಸುಳಿವು ಪೊಲೀಸರಿಗೆ ಸಿಕ್ಕಿದ್ದು ಕೂಡ ರೋಚಕವೇ. ಏಕೆಂದರೆ ಪ್ರತಾಪ್‌ ಬಳಿ ಇರುವ ಫೋನ್‌ ಒಂದರ ಮಾಹಿತಿ ಪೊಲೀಸರಿಗೆ ಇತ್ತು. ಆದರೆ ಈ ಫೋನ್‌ ಮೂಲಕ ಸಂಪರ್ಕ ಪೊಲೀಸರಿಗೆ ಸಾಧ್ಯವೇ ಆಗಿರಲಿಲ್ಲ. ಬೆಂಗಳೂರಿನ ಸುತ್ತಮುತ್ತಲಷ್ಟೇ ಈ ಸಂಪರ್ಕ ಕೊನೆಗೊಳ್ಳುತ್ತಿತ್ತು. ಆದ್ದರಿಂದ ಆತ ಬೆಂಗಳೂರಿನ ಆಸುಪಾಸು ಇರಬಹುದು ಎಂದು ಶೋಧನೆ ನಡೆಸಲಾಗಿತ್ತು.

ನಂತರ ಪೊಲೀಸರಿಗೆ ತಿಳಿದುಬಂದದ್ದೇನೆಂದರೆ ಈತನ ಬಳಿ ಇನ್ನೊಂದು ಫೋನ್‌ ಕೂಡ ಇತ್ತು. ಆ ಫೋನ್‌ನ ಸಿಗ್ನಲ್‌ ಆಧಾರದ ಮೇಲೆ ಈತ ಮೈಸೂರಿನಲ್ಲಿಯೇ ಇರುವ ಬಗ್ಗೆ ತಿಳಿದುಬಂತು. ಇಂದು ಬೆಳಗ್ಗೆ ಆತನ ಇರುವಿಕೆಯನ್ನು ಪತ್ತೆ ಹಚ್ಚಿದ್ದ ಪೊಲೀಸರ ತಂಡ ಮೈಸೂರಿಗೆ ಹೋಗಿದೆ.

ಅಲ್ಲಿ ಪೊಲೀಸರು ಬಂದಿದ್ದನ್ನು ನೋಡಿ ಶರಣಾಗದೇ ಪ್ರತಾಪ್‌ಗೆ ಬೇರೆ ದಾರಿ ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಆತನನ್ನು ಬಂಧಿಸಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿರುವುದಾಗಿ ಮೂಲಗಳು ತಿಳಿಸಿವೆ.

ವಾಪಸ್‌ ಕರೆತಂದ ಬಳಿಕ ಬೆಂಗಳೂರಿನಲ್ಲಿ ಈತನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.