ನ್ಯೂಸ್

ASEAN ಶೃಂಗಸಭೆಗೆ ಪ್ರಧಾನಿ ಮೋದಿ ಗೈರು..?; ವಿದೇಶಾಂಗ ಸಚಿವ ಎಸ್​​ ಜೈ ಶಂಕರ್​ ಭಾಗವಹಿಸುವ ಸಾಧ್ಯತೆ!

Delhi: ಭಾನುವಾರದಿಂದ ಆರಂಭವಾಗಲಿರುವ ಆಸಿಯಾನ್(ASEAN) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾಕ್ಕೆ ಪ್ರಯಾಣಿಸುವ ಸಾಧ್ಯತೆ ಕಡಿಮೆ ಇದ್ದು, ಅವರ ಬದಲಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿಯಾಗಿದೆ.

ಶೃಂಗಸಭೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾರತ ಪಾಲ್ಗೊಳ್ಳುವ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಸಭೆಗಳಲ್ಲಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ಸಂದೇಶವನ್ನು ಮಲೇಷ್ಯಾಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದ್ದು, ವೇಳಾಪಟ್ಟಿ ಸಮಸ್ಯೆಗಳಿಂದಾಗಿ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆನ್​ಲೈನ್​​ ಮೂಲಕ ಭಾಗವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅನೇಕ ವರ್ಷಗಳಿಂದ ಪ್ರಧಾನಿ ಮೋದಿ, ಆಸಿಯಾನ್-ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾರತೀಯ ನಿಯೋಗಗಳ ನೇತೃತ್ವ ವಹಿಸಿದ್ದಾರೆ. ಮಲೇಷ್ಯಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆಸಿಯಾನ್ ನ ಸಂವಾದ ಪಾಲುದಾರರಾಗಿರುವ ಹಲವಾರು ದೇಶಗಳ ನಾಯಕರನ್ನು ಆಹ್ವಾನಿಸಿದೆ. ಟ್ರಂಪ್ ಅಕ್ಟೋಬರ್ 26 ರಂದು ಎರಡು ದಿನಗಳ ಪ್ರವಾಸಕ್ಕಾಗಿ ಕೌಲಾಲಂಪುರಕ್ಕೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. 1992 ರಲ್ಲಿ ವಲಯ ಪಾಲುದಾರಿಕೆಯನ್ನು ಸ್ಥಾಪಿಸುವುದರೊಂದಿಗೆ ಆಸಿಯಾನ್-ಭಾರತ ಸಂವಾದ ಸಂಬಂಧಗಳು ಪ್ರಾರಂಭವಾಗಿದ್ದು, ಇದು ಡಿಸೆಂಬರ್ 1995 ರಲ್ಲಿ ಪೂರ್ಣ ಸಂವಾದ ಪಾಲುದಾರಿಕೆಯಾಗಿ ಮತ್ತು 2002 ರಲ್ಲಿ ಶೃಂಗಸಭೆ ಮಟ್ಟದ ಪಾಲುದಾರಿಕೆಯಾಗಿ ಮಾರ್ಪಾಡಾಗಿದೆ. ಈ ಸಂಬಂಧಗಳನ್ನು 2012 ರಲ್ಲಿ ಕಾರ್ಯತಂತ್ರದ ಪಾಲುದಾರಿಕೆಯಾಗಿ ಉನ್ನತೀಕರಿಸಲಾಯಿತು.

ಆಸಿಯಾನ್‌ನ 10 ಸದಸ್ಯ ರಾಷ್ಟ್ರಗಳು: ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್, ಬ್ರೂನಿ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾ.

ಕಳೆದ ಅನೇಕ ವರ್ಷಗಳಿಂದ ಭಾರತ ಮತ್ತು ಆಸಿಯಾನ್ ನಡುವಿನ ದ್ವಿಮುಖ ಸಂಬಂಧಗಳು ಗಮನಾರ್ಹ ಏರಿಕೆಯನ್ನು ಕಂಡಿದ್ದು, ವ್ಯಾಪಾರ ಮತ್ತು ಹೂಡಿಕೆ ಹಾಗೂ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಪ್ರಾರಂಭಿಕ ಯೋಜನೆಯ ಪ್ರಕಾರ, ಪ್ರಧಾನಿ ಮೋದಿ ಮಲೇಷ್ಯಾ ಜೊತೆಗೆ ಕಾಂಬೋಡಿಯಾಕ್ಕೂ ಭೇಟಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ ಅವರು ಮಲೇಷ್ಯಾಕ್ಕೆ ಪ್ರಯಾಣಿಸುವುದೇ ಅನುಮಾನವಾಗಿರುವುದರಿಂದ ಕಾಂಬೋಡಿಯಾ ಪ್ರವಾಸವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.

ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಶೃಂಗಸಭೆಯು ಅಕ್ಟೋಬರ್ 26 ರಿಂದ 28 ರವರೆಗೆ ಕೌಲಾಲಂಪುರದಲ್ಲಿ ನಡೆಯಲಿದೆ.(ಏಜೆನ್ಸೀಸ್​)