ನವದೆಹಲಿ: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ನೌಕೆ ಇಂದು ಭೂಮಿಗೆ ಪ್ರಯಾಣ ಬೆಳೆಸಿದೆ. ಸುನೀತಾ ವಿಲಿಯಮ್ಸ್ ಮತ್ತು ಅವರ ಸಹಚರ ಬುಚ್ ವಿಲ್ಮೋರ್ ಅವರ ಬಾಹ್ಯಾಕಾಶ ನೌಕೆ ವೇಗವಾಗಿ ಭೂಮಿಯನ್ನು ಸಮೀಪಿಸುತ್ತಿದೆ. ಇಬ್ಬರೂ ಗಗನಯಾತ್ರಿಗಳು ಸ್ಪೇಸ್‌ಎಕ್ಸ್ ಸಿಬ್ಬಂದಿ ಕ್ಯಾಪ್ಸುಲ್‌ನಲ್ಲಿ ಭೂಮಿಗೆ ಹಿಂತಿರುಗುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 'ಮಗಳು' ಸುನೀತಾ ವಿಲಿಯಮ್ಸ್ ಹಿಂದಿರುಗುವ ಮೊದಲು ಅವರಿಗೆ ಪತ್ರ(PM Modi Letter) ಬರೆದಿದ್ದಾರೆ. ಅವರು ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಮೂಲಕ ಪತ್ರವನ್ನು ಕಳುಹಿಸಿದ್ದಾರೆ.
ಇದನ್ನು ಓದಿ: ಬಾಹ್ಯಾಕಾಶದಲ್ಲಿ 9 ತಿಂಗಳ ಹೆಚ್ಚುವರಿ ಕೆಲಸ; ಸುನೀತಾ ವಿಲಿಯಮ್ಸ್ ಸಂಭಾವನೆ ಎಷ್ಟಿರಬಹುದು? | Sunita Williams
ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಪತ್ರವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಜಗತ್ತು ಸುನೀತಾ ವಿಲಿಯಮ್ಸ್ ಅವರ ಸುರಕ್ಷಿತ ಮರಳುವಿಕೆಗಾಗಿ ಕಾತರದಿಂದ ಕಾಯುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಈ ಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಬರೆದಿರುವ ಪತ್ರದಲ್ಲಿ, ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ ಎಂದು ಹೇಳಿದ್ದಾರೆ. ಈ ಪತ್ರವು 1.4 ಬಿಲಿಯನ್ ಭಾರತೀಯರ ಹೆಮ್ಮೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಜನರು ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ಮಾಸ್ಸಿಮಿನೊ ಅವರನ್ನು ಭೇಟಿಯಾದರು ಮತ್ತು ತಮ್ಮ ಹಾಗೂ ಭಾರತದ ಜನರ ಈ ಪತ್ರವು ಅವರಿಗೆ ತಲುಪಬೇಕೆಂದು ವಿನಂತಿಸಿದರು. ಅವರ ಶಕ್ತಿ ಮತ್ತು ಸುರಕ್ಷಿತ ಮರಳುವಿಕೆಯನ್ನು ಹಾರೈಸಿದ ಪ್ರಧಾನಿ, ಭಾರತವು ತನ್ನ ಶ್ರೇಷ್ಠ ಪುತ್ರಿಯೊಂದಿಗೆ ಹೊಂದಿರುವ ಆಳವಾದ ಬಾಂಧವ್ಯವನ್ನು ಪುನರುಚ್ಚರಿಸಿದರು.
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸಭೆಗಳ ಸಮಯದಲ್ಲಿ ಸುನೀತಾ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದನ್ನೂ ಪ್ರಧಾನಿ ನೆನಪಿಸಿಕೊಂಡರು. ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ಅವರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸುತ್ತಿರುವ ಭಾರತೀಯರ ಹೃದಯಗಳಿಗೆ ಅವರು ಹತ್ತಿರವಾಗಿದ್ದಾರೆ ಎಂದು ಹೇಳಿದರು.
ಮೋದಿ ಅವರು ವಿಲಿಯಮ್ಸ್ ಅವರ ಕುಟುಂಬ ಬೋನಿ ಪಾಂಡ್ಯ ಅವರನ್ನು ಉಲ್ಲೇಖಿಸಿದರು ಮತ್ತು 2016ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅವರ ದಿವಂಗತ ತಂದೆ ದೀಪಕ್‌ಭಾಯ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ಅವರು ಭಾರತಕ್ಕೆ ಹಿಂದಿರುಗಿದಾಗ ಅವರನ್ನು ಸ್ವಾಗತಿಸಲು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ ಅವರು, ಅವರನ್ನು ದೇಶದ ಅತ್ಯಂತ ಪ್ರತಿಷ್ಠಿತ ಹೆಣ್ಣುಮಗಳಲ್ಲಿ ಒಬ್ಬರು ಎಂದು ಬಣ್ಣಿಸಿದರು. ಪತ್ರವು ಅವರ ಪತಿ ಮೈಕೆಲ್ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬ್ಯಾರಿ ವಿಲ್ಮೋರ್ ಅವರಿಗೆ ಆತ್ಮೀಯ ಶುಭಾಶಯಗಳೊಂದಿಗೆ ಮುಕ್ತಾಯಗೊಂಡಿತು.
ಸುನೀತಾ ವಿಲಿಯಮ್ಸ್ ಭೂಮಿಗೆ ಇಳಿಯುವ ಸಮಯದಲ್ಲಿ ಹವಾಮಾನವು ಅನುಕೂಲಕರವಾಗಿರುತ್ತದೆ. ನಾಸಾ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಭಾನುವಾರ ನಾಸಾ ನೀಡಿದೆ ಹೇಳಿಕೆ ಪ್ರಕಾರ, ಗಗನಯಾತ್ರಿಗಳು ನಾಳೆ ಸಂಜೆ ಸುಮಾರು 5.57ಕ್ಕೆ ಅಂದರೆ, ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗಿನ ಜಾವ 3.30ಕ್ಕೆ ಭೂಮಿಗೆ ಮರಳಲಿದ್ದಾರೆ ಎಂದು ತಿಳಿಸಿದೆ. ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದ್ದಾರೆ.(ಏಜೆನ್ಸೀಸ್)