ನ್ಯೂಸ್

ಶ್ರೀರಂಗಂನ ರಂಗನಾಥಸ್ವಾಮಿ ದೇವಸ್ಥಾನ ಪರವಾಗಿ ಅಯೋಧ್ಯೆ ರಾಮ ಮಂದಿರಕ್ಕೆ ಸ್ಪೆಷಲ್​ ಗಿಫ್ಟ್​ ಪಡೆದ ಪ್ರಧಾನಿ ಮೋದಿ

ತಿರುಚಿರಾಪಳ್ಳಿ: ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮೀಪದಲ್ಲಿ ಪ್ರಧಾನಿ ಮೋದಿ ಅವರು ಈ ರಂಗನಾಥ ದೇವಸ್ಥಾನಕ್ಕೆ ನೀಡಿರುವುದು ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ, ಈ ರಂಗನಾಥ ಸ್ವಾಮಿ ದೇವಾಲಯಕ್ಕೂ ಭಗವಾನ್ ರಾಮನಿಗೂ ಒಂದು ಆಳವಾದ ಸಂಪರ್ಕವಿದೆ. ಶ್ರೀರಂಗದಲ್ಲಿ ಪೂಜಿಸಲ್ಪಡುತ್ತಿರುವುದು ವಿಷ್ಣುವಿನ ರೂಪವಾದ ಶ್ರೀ ರಂಗನಾಥ ಸ್ವಾಮಿ ವಿಗ್ರಹವಾಗಿದೆ. ಈ ವಿಗ್ರಹವನ್ನು ಮೂಲತಃ ಭಗವಾನ್ ರಾಮ ಮತ್ತು ಅವನ ಪೂರ್ವಜರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಈ ವಿಗ್ರಹವನ್ನು ಬ್ರಹ್ಮನು ರಾಮನ ಪೂರ್ವಜರಿಗೆ ಕೊಟ್ಟರು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.

ತಮಿಳುನಾಡಿನ ಈ ಪುರಾತನ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ‘ವೇಷ್ಟಿ’ (ಪಂಚೆ) ಮತ್ತು ಅಂಗವಸ್ತ್ರ (ಶಾಲು) ಧರಿಸಿ ಕೈಮುಗಿದು ಪ್ರಾರ್ಥಿಸಿದರು. ದೇವಸ್ಥಾನದ ಆನೆಗೆ ಆಹಾರ ನೀಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ದೇವರ ಪರವಾಗಿ ಅಯೋಧ್ಯೆ ರಾಮಮಂದಿರಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಅವರಿಗೆ ವಿಶೇಷ ಉಡುಗೊರೆಯನ್ನು ಸಹ ನೀಡಲಾಯಿತು. ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿದ್ವಾಂಸರ ಕಂಬ ರಾಮಾಯಣದ ಪದ್ಯಗಳನ್ನು ಪಠಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಲಿಸಿದರು.

ದ್ವೀಪವೊಂದರಲ್ಲಿ ನೆಲೆಸಿರುವ ಹಾಗೂ ಕಾವೇರಿ ಮತ್ತು ಕೊಲ್ಲಿದಂ ನದಿಗಳ ಸಂಗಮದಲ್ಲಿರುವ ಶ್ರೀರಂಗಂ ದೇವಾಲಯವು ತಮಿಳುನಾಡಿನ ಪ್ರಾಚೀನ ವೈಷ್ಣವ ದೇವಾಲಯವಾಗಿದೆ. ಇದು ಸಂಗಂ ಯುಗಕ್ಕೂ ಹಿಂದಿನದು ಎನ್ನಲಾಗಿದೆ. ಈ ದೇವಾಲಯವನ್ನು 'ಬೂಲೋಗ ವೈಕುಂಠಂ' ಅಥವಾ 'ಭೂಮಿಯ ಮೇಲಿನ ವೈಕುಂಠಂ' ಎಂದೂ ಕರೆಯಲಾಗುತ್ತದೆ. ವೈಕುಂಟಂ ವಿಷ್ಣುವಿನ ಶಾಶ್ವತ ನಿವಾಸವಾಗಿದೆ. (ಏಜೆನ್ಸೀಸ್​)