ಜೈಪುರ: ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಪೇಪರ್ ಲೀಕ್ ಮಾಫಿಯಾದ ಮೂಲಕ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ಧಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತವರು ಜಿಲ್ಲೆ ಜೋಧ್ಪುರದಲ್ಲಿ ಐದು ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಂಪು ಡೈರಿಯ ವಿಚಾರವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಈ ಹಿಂದೆ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರು ತಾವು ಸಂಪುಟದಿಂದ ವಜಾಗೊಂಡ ಬಳಿಕ ಕೆಂಪು ಡೈರಿಯ ಬಗ್ಗೆ ಉಲ್ಲೇಖಿಸಿ ಮಾಧ್ಯಮಗಳ ಮುಂದೆ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಮಾಡಿರುವ ಪ್ರತಿಯೊಂದು ಭ್ರಷ್ಟಾಚಾರ ಪ್ರಕರಣದ ಕರಾಳ ಕೃತ್ಯಗಳು ಆ ಡೈರಿಯಲ್ಲಿ ದಾಖಲಾಗಿವೆ. ಒಂದು ವೇಳೆ ಅದರು ಹೊರಬಂದರೆ ಕಾಂಗ್ರೆಸ್ ಸರ್ಕಾರದ ಕರ್ಮಕಾಂಡ ಬಯಲಾಗುತ್ತದೆ. ಅದನ್ನು ಬಯಲಿಗೆಳೆಯಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಎಂದಿಗೂ ರೈತರು ಹಾಗೂ ಯೋಧರ ಬಗ್ಗೆ ಯೋಚನೆ ಮಾಡಿಲ್ಲ. ಕುರ್ಚಿಗಿಂತ ಅವರಿಗೆ ಮುಖ್ಯವಾದದ್ದು ಬೇರೇನೂ ಇಲ್ಲ. ವೋಟ್ಬ್ಯಾಂಕ್ ರಾಜಕ್ಕಾರಣಕ್ಕಾಗಿ ಜನರ ಹಿತಾಸಕ್ತಿಯನ್ನು ನಿರಾಕರಿಸಿ ಏನೂ ಬೇಕಾದರೂ ಮಾಡಲು ಸಿದ್ದವಾಗಿರುತ್ತದೆ. ಬಿಜೆಪಿ ಅಧಿಕಾರಕ್ಕೇರಿದ್ದಲ್ಲಿ ರಾಜ್ಯವನ್ನು ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಸ್ಥಾನವನ್ನು ನಂಬರ್ ಒನ್ ಮಾಡಲಿದ್ಧೇವೆ. ಬಿಜೆಪಿ ಸರ್ಕಾರ ರಚನೆಯ ನಂತರ ರಾಜ್ಯದ ಪ್ರತಿ ಮೂಲೆಮೂಲೆಗೂ ಅಭಿವೃದ್ಧಿಯನ್ನು ಕೊಂಡೊಯ್ಯಲಿದೆ ಎಂದು ವಾಗ್ದಾನ ಮಾಡಿದ್ದಾರೆ.
ಇದಲ್ಲದೆ, ನಮ್ಮ ವಿಜ್ಞಾನಿಗಳ ಉತ್ತಮ ಕೆಲಸವನ್ನು ಪ್ರದರ್ಶಿಸಿದ್ದಕ್ಕಾಗಿ” ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ತಯಾರಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ನಮ್ಮ ವಿಜ್ಞಾನಿಗಳು ಕೋವಿಡ್ -19 ಲಸಿಕೆ ತಯಾರಿಸಲು ಹಗಲು ರಾತ್ರಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಚಲನಚಿತ್ರ ತೋರಿಸುತ್ತದೆ. ಚಲನಚಿತ್ರಗಳನ್ನು ನೋಡಿದ ನಂತರ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ, ಎಂದು ಪ್ರಧಾನಿ ಮೋದಿ ಜೋಧ್ಪುರದಲ್ಲಿ ಹೇಳಿದ್ದಾರೆ.
ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಚುನಾವಣಾ ಆಯೋಗ ಶೀಘ್ರದಲ್ಲೇ ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ.