ನ್ಯೂಸ್

ಪ್ರಧಾನಿ ಮೋದಿಗೆ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ..!

ನವದೆಹಲಿ: ಅಂತರಾಷ್ಟ್ರೀಯ ನಾಯಕರಾಗಿ ತಮ್ಮ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ 77 ಶೇಕಡಾ ಅನುಮೋದನೆಯೊಂದಿಗೆ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ ನಂತರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ 56 ಶೇಕಡಾ ಅನುಮೋದನೆ ಪಡೆದಿದ್ದು ಅಮೆರಿಕಾ ಅಧ್ಯಕ್ಷ ಜೋ ಬಿಡನ್ 41% ಅನುಮೋದನೆ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. “ಮತ್ತೊಮ್ಮೆ ಪ್ರಧಾನಿ ಮೋದಿ ಜಾಗತಿಕ ವೇದಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಿಎಂ ಮೋದಿಯವರ ಅನುಮೋದನೆ ರೇಟಿಂಗ್‌ ಎಲ್ಲಾ ವಿಶ್ವ ನಾಯಕರಲ್ಲಿ ಅತ್ಯಧಿಕವಾಗಿದೆ. 77% ಅನುಮೋದನೆ ರೇಟಿಂಗ್‌ಗಳೊಂದಿಗೆ ಪಿಎಂ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ' ಎಂದು ಬಿಜೆಪಿ ಟ್ವೀಟ್​ ಮಾಡಿದೆ.

ಜೋ ಬಿಡೆನ್ ನಂತರ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ 38 ಶೇಕಡಾ ಮತ್ತು ಹೊಸದಾಗಿ ನೇಮಕಗೊಂಡ ಯುಕೆ ಪ್ರಧಾನಿ ರಿಷಿ ಸುನಕ್ 36% ಅನುಮೋದನೆ ಪಡೆದಿದ್ದಾರೆ. 23% ಅನುಮೋದನೆ ರೇಟಿಂಗ್‌ನೊಂದಿಗೆ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಆರನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಸರ್ಕಾರಿ ನಾಯಕರು ಮತ್ತು ದೇಶದ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುವ ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಗ್ರೂಪ್ ಈ ಸಮೀಕ್ಷೆಯನ್ನು ನಡೆಸಿದೆ.

ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ, ಆಗಸ್ಟ್ 2022 ರಲ್ಲಿ, ಪ್ರಧಾನಿ ಮೋದಿ ಶೇಕಡಾ 75 ರ ಅನುಮೋದನೆಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. (ಏಜೆನ್ಸೀಸ್​)