ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಇಂದು ಬೆಳಗ್ಗೆ ರಾಜಧಾನಿ ದೆಹಲಿಯಿಂದ ಅಮೆರಿಕಕ್ಕೆ ತೆರಳಿದರು. ಇದೊಂದು ಮಹತ್ವದ ಪ್ರವಾಸವಾಗಿದ್ದು, ಸಾಕಷ್ಟು ದ್ವಿಪಕ್ಷೀಯ ಒಪ್ಪಂದಗಳಿಗೆ ಇದು ಸಾಕ್ಷಿಯಾಗಲಿದೆ.
ಮುಂದಿನ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಅಮೆರಿಕದಲ್ಲಿ ಇರಲಿದ್ದಾರೆ. ಈ ವೇಳೆ ಅವರು ಯುಎಸ್ ಕಾಂಗ್ರೆಸ್ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಉದ್ಯಮಿಗಳು ಮತ್ತು ಅನಿವಾಸಿ ಭಾರತೀಯರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ವೈಟ್ ಹೌಸ್ನಲ್ಲಿ ವಿಶೇಷ ಭೋಜನಕೂಟದಲ್ಲೂ ಪ್ರಧಾನಿ ಭಾಗಿಯಾಗಲಿದ್ದಾರೆ.
ಗುರುವಾರ ಯುಎಸ್ ಕಾಂಗ್ರೆಸ್ ಜಂಟಿ ಸದನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್ನಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್, ಪ್ರಧಾನಿ ಭಾಷಣಕ್ಕೆ ಆಹ್ವಾನವನ್ನು ನೀಡಿದೆ.
ಯಾವುದೇ ಭಾರತೀಯ ಪ್ರಧಾನಿಯು ಯುಎಸ್ ಕಾಂಗ್ರೆಸ್ನಲ್ಲಿ ಎರಡು ಬಾರಿ ಭಾಷಣ ಮಾಡಿಲ್ಲ. ವಿನ್ಸ್ಟನ್ ಚರ್ಚಿಲ್, ನೆಲ್ಸನ್ ಮಂಡೇಲಾ ಬಿಟ್ಟರೆ ವಿಶ್ವ ನಾಯಕರು ಕೂಡ ಎರಡು ಬಾರಿ ಯುಎಸ್ ಕಾಂಗ್ರೆಸ್ನಲ್ಲಿ ಮಾತನಾಡಿಲ್ಲ. ಹೀಗಾಗಿ ಪ್ರಧಾನಿ ಭಾಷಣಕ್ಕೆ ತುಂಬಾ ಮಹತ್ವ ಇದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದ್ದಾರೆ.
ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ದಕ್ಷಿಣ ಕೊರಿಯಾದ ಯೂನ್ ಸುಕ್ ಯೋಲ್ ನಂತರ ಅಧ್ಯಕ್ಷ ಬಿಡೆನ್ ಅವರು ರಾಷ್ಟ್ರದ ಭೇಟಿ ಮತ್ತು ಭೋಜನಕ್ಕೆ ಆಹ್ವಾನಿಸಿದ ಮೂರನೇ ವಿಶ್ವ ನಾಯಕ ಪ್ರಧಾನಿ ಮೋದಿ ಆಗಿದ್ದಾರೆ.
ನಾಳೆ (ಜೂ.21) ವಿಶ್ವ ಯೋಗ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯುವ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಶುಕ್ರವಾರ, ಪ್ರಧಾನಿ ಅವರು ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ವಲಸಿಗ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಮೆರಿಕಕ್ಕೆ ಹೊರಡುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಯುಎಸ್ಎನಲ್ಲಿ, ನಾನು ಉದ್ಯಮ ನಾಯಕರನ್ನು ಭೇಟಿ ಮಾಡಲು, ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ಮತ್ತು ವಿವಿಧ ನಾಯಕರನ್ನು ಭೇಟಿ ಮಾಡಲು ಅವಕಾಶವನ್ನು ಪಡೆಯುತ್ತಿದ್ದೇನೆ. ವ್ಯಾಪಾರ, ವಾಣಿಜ್ಯ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಯುಎಸ್ಎ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವು ಬಯಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)