ನ್ಯೂಸ್

ಹೆಸರೇ ತಿಳಿದಿಲ್ಲದ ರಾಷ್ಟ್ರಗಳಿಗೆ ಭೇಟಿ: ಪ್ರಧಾನಿ ಮೋದಿ ವಿದೇಶಿ ಪ್ರವಾಸ ಲೇವಡಿ ಮಾಡಿದ ಪಂಜಾಬ್​ ಸಿಎಂ! Bhagwant Mann

Bhagwant Mann : ವಿದೇಶಾಂಗ ನೀತಿಯ ಬಗೆಗಿನ ಕೇಂದ್ರದ ನಿಲುವು ಮತ್ತು ದಿಲ್ಜಿತ್ ದೋಸಾಂಜ್ ಅವರ ಚಿತ್ರದಲ್ಲಿ ಪಾಕಿಸ್ತಾನಿ ನಟನ ಪಾತ್ರದ ಬಗ್ಗೆ ಇತ್ತೀಚೆಗೆ ಎದ್ದಿರುವ ವಿವಾದವನ್ನು ಪ್ರಶ್ನಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವಾಲಯದ (MEA) ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ (ಜುಲೈ10) ವಾಗ್ದಾಳಿ ನಡೆಸಿದ್ದಾರೆ.

ವಿದೇಶಾಂಗ ನೀತಿಯ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿರುವ ಮಾನ್, ವಿದೇಶಾಂಗ ನೀತಿ ಏನು ಎಂದು ಪ್ರಧಾನಿಯನ್ನು ಕೇಳುವ ಹಕ್ಕು ನಮಗಿಲ್ಲವೇ? ನಮ್ಮನ್ನು ಯಾರು ಬೆಂಬಲಿಸಿದ್ದಾರೆ? ಹಾಗಾದರೆ ನೀವು ಏಕೆ ವಿದೇಶಗಳಿಗೆ ಭೇಟಿ ನೀಡುತ್ತೀರಿ?ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸ್ಪಷ್ಟ ರಾಜತಾಂತ್ರಿಕ ಕಾರಣಗಳು ಅಥವಾ ಫಲಿತಾಂಶಗಳಿಲ್ಲದೆ ಪ್ರಧಾನಿ ಆಗಾಗ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಹೆಸರುಗಳೇ ತಿಳಿದಿಲ್ಲದ ರಾಷ್ಟ್ರಗಳಿಗೆ ಪ್ರಧಾನಿ ಹೋಗುತ್ತಿದ್ದಾರೆ. ಅಂತಹ ಸಣ್ಣ ರಾಷ್ಟ್ರಗಳಿಂದ ಗೌರವಗಳನ್ನು ಪಡೆಯುತ್ತಿದ್ದಾರೆ. ಇಲ್ಲಿ ಜೆಸಿಬಿ ಕೆಲಸ ನಡೆದರೆ ಸಾಕು ಅಷ್ಟೇ ಸಂಖ್ಯೆಯ ಜನರು ಸೇರುತ್ತಾರೆ ಎಂದು ಭಗವಂತ್​ ಮಾನ್ ಗೇಲಿ​ ಮಾಡಿದರು.

ವಿದೇಶಿ ಭೇಟಿಗಳ ಬಗ್ಗೆ ಸರ್ಕಾರದ ಪ್ರಚಾರವನ್ನು ಲೇವಡಿ ಮಾಡಿದ ಮಾನ್, ಮೋದಿ ಎರಡು ರಾಷ್ಟ್ರಗಳ ನಡುವಿನ ಯುದ್ಧವನ್ನು ನಿಲ್ಲಿಸಿದ್ದಾರೆ ಎಂಬ ಜಾಹೀರಾತುಗಳು ಬರುತ್ತಿವೆ. ಹಾಗಾದರೆ ಪ್ರಧಾನಿ ಪಂಜಾಬ್ ಮತ್ತು ಹರಿಯಾಣ ನಡುವಿನ ಸಮಸ್ಯೆಗಳನ್ನು ಏಕೆ ಪರಿಹರಿಸಲು ಸಾಧ್ಯವಿಲ್ಲ? ಎಂದು ಇದೇ ವೇಳೆ ಪ್ರಶ್ನಿಸಿದರು. 2015ರಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಅನಿರೀಕ್ಷಿತ ಭೇಟಿಯನ್ನು ಉಲ್ಲೇಖಿಸಿದ ಅವರು "ಪ್ರಧಾನಿ ಕೆಲವೊಮ್ಮೆ ಆಹ್ವಾನವಿಲ್ಲದೆ ವಿದೇಶಗಳಿಗೆ ಹೋಗುತ್ತಾರೆ, ಅವರು ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಬಹುದು, ಆದರೆ ಆ ರೀತಿ ನಾವು ಹೋಗಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಪಾಕಿಸ್ತಾನಿ ನಟ ದಿಲ್ಜಿತ್ ದೋಸಾಂಜ್ ಅವರ ಮುಂಬರುವ ಚಿತ್ರದ ಕುರಿತು ಹಬ್ಬಿರುವ ವಿವಾದದ ಕುರಿತು ಮಾತನಾಡುತ್ತಾ ಆಕ್ರೋಶ ಹೊರಹಾಕಿದ ಮಾನ್, ಈಗ ದಿಲ್ಜಿತ್ ದೋಸಾಂಜ್ ಚಿತ್ರದ ಬಗ್ಗೆ ವಿವಾದವಿದೆ. ಇದರಲ್ಲಿ ಪಾಕಿಸ್ತಾನಿ ನಟ ಕೆಲಸ ಮಾಡಿದ್ದ ಬಗ್ಗೆ ಬಹಳ ಹಿಂದೆಯೇ ವಿವಾದವಿತ್ತು ಮತ್ತು ಈಗ ಅವರು 'ಗದ್ದರ್' ಎಂದು ಹೇಳುತ್ತಿದ್ದಾರೆ. ಕೆಲವೊಮ್ಮೆ, ಅವರು ಗದ್ದರ್ ಅಥವಾ ಕೆಲವೊಮ್ಮೆ ಸರ್ದಾರ್ ಎಂದು ಹೇಳುತ್ತಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಭೇಟಿಗಳನ್ನು ಅಪಹಾಸ್ಯ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಹೇಳಿಕೆಗಳನ್ನು ವಿದೇಶಾಂಗ ಸಚಿವಾಲಯ ಗುರುವಾರ ತೀವ್ರವಾಗಿ ಟೀಕಿಸಿದ್ದು, “ಬೇಜವಾಬ್ದಾರಿ ಮತ್ತು ವಿಷಾದನೀಯ” ಹೇಳಿಕೆಗಳು ಎಂದು ಕರೆದಿದೆ. (ಏಜೆನ್ಸೀಸ್​)