ನ್ಯೂಸ್

ಡೆಲಿವರಿ ಬಾಯ್​ ಮೇಲೆ ಪಿಟ್​ಬುಲ್ ದಾಳಿ​! ರಕ್ತದ ಮಡುವಿನಲ್ಲೇ ಕಾರಿನ ಮೇಲತ್ತಿ ಜೀವ ಉಳಿಸಿಕೊಂಡ ಯುವಕ

ಮೋಹನ್​ ಶೆಟ್ಟಿ

ಛತ್ತೀಸ್‌ಗಢ: ಆನ್​ಲೈನ್​ನಲ್ಲಿ ಆರ್ಡರ್​​ ಮಾಡಲಾಗಿದ್ದ ವಸ್ತುವನ್ನು ವೈದ್ಯರೊಬ್ಬರ ಮನೆಗೆ ಡೆಲಿವರಿ ಕೊಡಲು ಗೇಟ್​ ತೆಗೆದು ಒಳಬಂದ ಯುವಕನ ಮೇಲೆ ಪಿಟ್​ಬುಲ್​ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಆತನ ಕೈ-ಕಾಲುಗಳನ್ನು ತೀವ್ರವಾಗಿ ಕಚ್ಚಿವೆ. ಈ ಘಟನೆ ರಾಜಧಾನಿ ರಾಯಪುರದ ಅನುಪಮ್ ನಗರದಲ್ಲಿ ಸಂಭವಿಸಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ವರದಿಗಳ ಪ್ರಕಾರ, ಶುಕ್ರವಾರ (ಜುಲೈ 12) ಮಧ್ಯಾಹ್ನ 1 ಗಂಟೆಗೆ ಈ ಘಟನೆ ಸಂಭವಿಸಿದೆ. ರಾಯ್‌ಪುರದ ಬೋರಿಯಾ ಮೋತಿನಗರದ ನಿವಾಸಿ ಶಾಹಿದ್ ಖಾನ್ ಅವರ ಪುತ್ರ ಸಲ್ಮಾನ್ ಖಾನ್, ಡಾ.ಅಕ್ಷತ್ ರಾವ್ ಅವರ ಮನೆಗೆ ಪಿವಿಸಿ ಪ್ಯಾನೆಲ್‌ಗಳನ್ನು ತಲುಪಿಸಲು ಹೋಗಿದ್ದರು. ಈ ವೇಳೆ ರಾವ್ ಮನೆಯ ಗೇಟ್​ ತೆಗೆದು ಒಳಗೆ ಹೋಗುತ್ತಿದ್ದಂತೆ ದಾಳಿ ಮಾಡಿದ ಎರಡು ಪಿಟ್​ಬುಲ್​ಗಳು, ಆತನ ಕೈ ಮತ್ತು ಕಾಲಿಗೆ ಕಚ್ಚಿದೆ. ರಕ್ತದ ಮಡುವಿನಲ್ಲಿದ್ದ ಯುವಕ ಸಹಾಯಹಸ್ತ ಬೇಡಿದ್ದಾನೆ. ಆ ಸಮಯಕ್ಕೆ ಯಾರಿಂದಲೂ ನೆರವು ಸಿಕ್ಕಿಲ್ಲ. ಆದ್ರೆ, ಅಲ್ಲೇ ಇದ್ದ ಮತ್ತೊಬ್ಬ ತನಗೆ ಸಹಾಯ ಮಾಡುವ ಅವಕಾಶವಿದ್ದರೂ ಕೂಡ ಅದನ್ನು ಬಿಟ್ಟು ವಿಡಿಯೋ ಮಾಡಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ.

ರಕ್ತದ ಮಡುವಿನಲ್ಲಿ ಹೇಗೋ ಮನೆಯಿಂದ ಹೊರಗೆ ಓಡಿಬಂದ ಯುವಕ, ತಕ್ಷಣವೇ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲತ್ತಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಸದ್ಯ ಆತನಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಸಲ್ಮಾನ್ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಮೇರೆಗೆ ಪೊಲೀಸರು ಶ್ವಾನ ಸಾಕಿದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).