ನ್ಯೂಸ್

'ಸ್ವೀಟಿ'ಗೆ ಪೈರಸಿ ಕಾಟ, ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು: ಪೈರಸಿ ಕಾಟ ನಟಿ ರಾಧಿಕಾ ಕುಮಾರಸ್ವಾಮಿಯನ್ನೂ ಕಾಡುತ್ತಿದೆ. ಇವರೇ ನಿರ್ಮಾಪಕಿ ಮತ್ತು ನಾಯಕಿ ಆಗಿರುವ ಸಿನಿಮಾವೊಂದನ್ನು ಯೂಟ್ಯೂಬ್​ನಲ್ಲಿ ಅಕ್ರಮವಾಗಿ ಅಪ್​ಲೋಡ್​ ಮಾಡಲಾಗಿದೆ.

ಈ ಬಗ್ಗೆ ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಕನ್ನಡದ 'ಸ್ವೀಟಿ' ಸಿನಿಮಾವನ್ನು ಯೂಟ್ಯೂಬ್​ನಲ್ಲಿ ಅಕ್ರಮವಾಗಿ ಅಪ್​ಲೋಡ್​ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಉತ್ತರ ವಿಭಾಗ ಸಿಇಎನ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2013ರಲ್ಲಿ ಬಿಡುಗಡೆಯಾದ ಸ್ವೀಟಿ ಸಿನಿಮಾದಲ್ಲಿ ಆದಿತ್ಯ ನಾಯಕನಾಗಿ, ನಾನು (ರಾಧಿಕಾ) ನಾಯಕಿಯಾಗಿ ಅಭಿನಯಿಸಿದ್ದೇವೆ.

ಈ ಸಿನಿಮಾಗೆ ನಾನೇ ನಿರ್ಮಾಪಕಿ. ಆದರೀಗ ನಿರ್ಮಾಪಕರ ಅನುಮತಿ ಪಡೆಯದೆ ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಲಾಗಿದೆ. 3 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಿದ್ದೆ. ಯಾರೋ ಚಲನಚಿತ್ರವನ್ನು ಕಾನೂನು ಬಾಹಿರವಾಗಿ ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿ ವಂಚಿಸಿದ್ದಾರೆ. ಕಾನೂನು ಕ್ರಮ ಜರುಗಿಸಬೇಕು ಎಂದು ರಾಧಿಕಾ ದೂರಿನಲ್ಲಿ ಒತ್ತಾಯಿಸಿದ್ದಾರೆ. ಇದರ ಅನ್ವಯ ಎಫ್​ಐಆರ್​ ದಾಖಲಿಸಿಕೊಂಡ ಸಿಇಎನ್​ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.