ನವದೆಹಲಿ: ಮಾನವರನ್ನು ಹೊರತುಪಡಿಸಿ ಪ್ರಾಣಿ-ಪಕ್ಷಿಗಳಲ್ಲಿನ ಮಕ್ಕಳ ಪ್ರೀತಿಯನ್ನು ವರ್ಣಿಸಲು ಪದಗಳೇ ಸಾಲದು. ಏಕೆಂದರೆ, ಮುಗ್ಧ ಜೀವಿಗಳಲ್ಲಿ ಸ್ವಾರ್ಥ ಎಂಬುದು ಇರುವುದೇ ಇಲ್ಲ. ಇಂತಹ ಎಷ್ಟೋ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರ ಮನಸ್ಪರ್ಶಿಸಿರುವುದನ್ನು ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಭಾರತೀಯ ಅರಣ್ಯಾಧಿಕಾರಿ (ಐಎಫ್ಎಸ್) ಪರ್ವೀನ್ ಕಾಸ್ವಾನ್ ಎಂದಿನಂತೆ ಶುಕ್ರವಾರವೂ ಸಹ ಫೋಟೋವೊಂದನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಸಿಂಹವೊಂದು ತನ್ನ ಮರಿಗಳ ಬಗ್ಗೆ ಪ್ರೀತಿ ತೋರುತ್ತಿದೆ. ತಾಯಿ ಸಿಂಹವೂ ತನ್ನ ಒಂದು ಮರಿಯ ಬೆನ್ನಿನ ಮೇಲೆ ಕಾಲನ್ನಿಟ್ಟು ಏನೋ ಹೇಳುತ್ತಿರುವಂತೆ ಭಾಸವಾಗುತ್ತದೆ.
ಫೋಟೋ ಕುರಿತು ಬರೆದುಕೊಂಡಿರುವ ಕಾಸ್ವಾನ್, ತಾಯಿ ಸಿಂಹವು ತನ್ನ ಮರಿಗೆ ಏನು ಹೇಳುತ್ತಿದೆ ಗೆಸ್ ಮಾಡಿ ಎಂದು ತನ್ನ ಟ್ವಿಟರ್ ಫಾಲೋವರ್ಸ್ಗೆ ಕೇಳಿದ್ದಾರೆ. ಆಗಸ್ಟ್ 10ರ ವಿಶ್ವ ಸಿಂಹ ದಿನಾಚರಣೆ ಹಿನ್ನೆಲೆಯಲ್ಲಿ ಕಾಸ್ವಾನ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸದ್ಯ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 1000ಕ್ಕೂ ಹೆಚ್ಚು ರೀಟ್ವೀಟ್ ಮಾಡಲಾಗಿದೆ. ಫೋಟೋ ನೋಡಿದ ನೆಟ್ಟಿಗರು ಕಾಮೆಂಟ್ ಬಾಕ್ಸ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ನೀನು ಮಗುವಾಗಿಯೇ ಇದ್ದುಬಿಡು ಬೆಳೆಯಬೇಡ ಮುಂದೊಮ್ಮೆ ಬಲೆಗೆ ಬೀಳುತ್ತೀಯ ಎಂದು ಮಗನಿಗೆ ಹೇಳುತ್ತಿರಬಹುದೇನೋ ಎಂದು ನೆಟ್ಟಿಗರೊಬ್ಬರು ಗೆಸ್ ಮಾಡಿದ್ದಾರೆ. ನಾನು ಮಗುವಾಗಿದ್ದಾಗ ಅವರು ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ತೆಗೆಯುತ್ತಿದ್ದರು ಎಂದು ಮಗುವಿಗೆ ಹೇಳಿದೆ ಎಂದು ಊಹಿಸಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ನೆಟ್ಟಿಗರು ಊಹಿಸಿದ್ದು, ನಿಮಗೇನು ತೋಚುತ್ತದೋ ಅದನ್ನು ಕಾಮೆಂಟ್ ಮಾಡಿ. (ಏಜೆನ್ಸೀಸ್)