ನ್ಯೂಸ್

ಸತ್ತಂತೆ ನಟಿಸಿ ಚಳ್ಳೆಹಣ್ಣು ತಿನ್ನಿಸೋಕೆ ಪ್ರಯತ್ನಿಸಿಯೂ ಪೊಲೀಸರ ಬಲೆಗೆ ಬಿದ್ದ ಮೇಯರ್​!

ಲಿಮಾ: ದಕ್ಷಿಣ ಪೆರುವಿನ ಟಂಟರಾ ಎಂಬ ಪುಟ್ಟಣ ನಗರದ ಮೇಯರ್​ ಜೈಮ್​ ರೊಲಾಂಡೊ ಅರ್ಬಿನಾ ಟೊರ್ರೆಸ್​ (ನೀಲಿ ಬಣ್ಣದ ಶರ್ಟ್​ ಧರಿಸಿದ ವ್ಯಕ್ತಿ). ಸತ್ತಂತೆ ನಟಿಸಿ ಶವಪೆಟ್ಟಿಗೆಯಲ್ಲಿ ಮಲಗಿದ್ದ ಟೊರ್ರೆಸ್ ಅವರನ್ನು ಪೊಲೀಸರು ಬಂಧಿಸಿದ್ರು. ಹೀಗೆ ವಿಲಕ್ಷಣ ರೀತಿಯಲ್ಲಿ ಬಂಧನಕ್ಕೆ ಒಳಗಾದ ಮೇಯರ್ ಕಾರಣಕ್ಕೆ ಪೆರುವಿನ ಪುಟ್ಟ ಪಟ್ಟಣ ಟಂಟರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯಿತು.

ಮೇಯರ್​ ಟೊರ್ರೆಸ್ ಅವರನ್ನು ಪೊಲೀಸರು ಬಂಧಿಸಿದ್ದೇಕೆ? ಅವರು ಸತ್ತಂತೆ ಶವಪೆಟ್ಟಿಗೆಯಲ್ಲಿ ಮಲಗಿದ್ದೇಕೆ? ಎಂಬಿತ್ಯಾದಿ ಸಹಜ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಜಗತ್ತಿನಲ್ಲೆಡೆ ಇರುವಂತೆ ಈ ಪಟ್ಟಣದಲ್ಲೂ ಲಾಕ್​ಡೌನ್ ಚಾಲ್ತಿಯಲ್ಲಿದೆ. ಮದ್ಯ ಸೇವನೆ ಮಾಡದೇ ಇರಲು ಸಾಧ್ಯವಾಗದೇ ಲಾಕ್​ಡೌನ್​ನ ನಿಯಮಗಳನ್ನು ಗಾಳಿಗೆ ತೂರಿದ ಮೇಯರ್ ಮತ್ತು ಅವರ ಸಂಗಡಿಗರು ಸೋಮವಾರ ತಡರಾತ್ರಿ ಗುಟ್ಟಾಗಿ ಪಾರ್ಟಿ ಮಾಡಿದ್ದರು. ಕಂಠ ಮುಟ್ಟ ಕುಡಿದ ಕಾರಣ ಗದ್ದಲ ಉಂಟಾಗಿತ್ತು. ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದರು.

ಸೈರನ್ ಮೊಳಗಿಸುತ್ತ ಪೊಲೀಸ್ ಕಾರುಗಳು ಬಂದು ನಿಂತ ಕೂಡಲೇ ಎಚ್ಚೆತ್ತುಕೊಂಡ ಮೇಯರ್ ಟೊರ್ರೆಸ್​ ಅಲ್ಲಿಂದ ಓಡಿ ಹೋಗಲು ಚಿಂತನೆ ನಡೆಸಿದ್ದರು. ಆದರೆ ಅಷ್ಟರಲ್ಲಾಗಲೇ ಪೊಲೀಸರು ಸಮೀಪಿಸಿಯಾಗಿತ್ತು. ಕೂಡಲೇ ಅಲ್ಲಿ ಕೋವಿಡ್ 19 ರೋಗಿಗಳ ಶವಗಳಿಗೋಸ್ಕರ ತಂದಿಟ್ಟಿದ್ದ ಶವಪೆಟ್ಟಿಗೆಯೊಳಗೆ ಸೇರುವ ಆಲೋಚನೆ ಟೊರ್ರೆಸ್ ಮನಸ್ಸಿಗೆ ಬಂತು. ಕೂಡಲೇ ಶವಪೆಟ್ಟಿಗೆಯೊಳಕ್ಕೆ ಸೇರಿಕೊಂಡರು ಕೂಡ.

ಶವಪೆಟ್ಟೆಗೆಯೊಳಗೆ ಸೇರಿದಾತ ಮೇಯರ್ ಎಂಬುದು ಬಹಿರಂಗವಾಗುತ್ತಲೇ ಮೊಬೈಲ್​ನಲ್ಲಿ ಚಿತ್ರೀಕರಣಗೊಂಡ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿಬಿಟ್ಟಿತು. ಸುದ್ದಿ ಜಗತ್ತಿನ ಗಮನಸೆಳೆಯಿತು. ಪೊಲೀಸರು ಇವರ ವಿರುದ್ಧ ಕೇಸ್ ದಾಖಲಿಸಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)