| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಜನತೆ ಇನ್ನು ಜಮೀನುಗಳ ಸರ್ವೆ ಮಾಡಲು ಸರ್ವೆಯರ್ಗಳಿಗಾಗಿ ತಿಂಗಳುಗಟ್ಟಲೆ ಕಾಯುವ ಅಗತ್ಯವಿಲ್ಲ. ಏಕೆಂದರೆ, ಮೊಬೈಲ್ ಆ್ಯಪ್ ಮೂಲಕ ಭೂಮಿಯನ್ನು ಸ್ವಯಂ ಸರ್ವೆ ಮಾಡಬಹುದಾದ ಜನೋಪಯೋಗಿ ವ್ಯವಸ್ಥೆ ಶೀಘ್ರ ಸಾಕಾರವಾಗಲಿದೆ. ಹೌದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿ ಭೂಮಿ ಸರ್ವೆ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ. ಭೂ ಸರ್ವೆ ಇಲಾಖೆ ಮೊಬೈಲ್ ಆ್ಯಪ್ ಸಿದ್ಧಪಡಿಸುತ್ತಿದ್ದು, ಹೊಸ ವರ್ಷದ ಆರಂಭದಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಮೊಬೈಲ್ ಭೂ ಸರ್ವೆ’ ಪದ್ಧತಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಪೋಡಿ ಮಾಡುವುದು, ಗಡಿ ಗುರುತಿಸುವುದು ಸೇರಿದಂತೆ ಬಹುದೊಡ್ಡ ರಗಳೆಗಳು ಸರ್ವೆಯಲ್ಲಿ ಇರುತ್ತವೆ. ಸರ್ವೆಯರ್ಗಳ ಕೊರತೆ ಕೂಡ ಸಾಕಷ್ಟು ಪ್ರಮಾಣದಲ್ಲಿದೆ. ಪ್ರತಿ ವರ್ಷ ಸರ್ವೆಗಾಗಿಯೇ ರಾಜ್ಯದಲ್ಲಿ 7 ರಿಂದ 10 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಬಹುತೇಕ ಸರ್ವೆ ಕಾರ್ಯಗಳು ಮುಗಿಯುವುದಿಲ್ಲ. ಇಂಥ ಸಮಸ್ಯೆಗಳೆಲ್ಲವೂ ಮುಂದಿನ ದಿನಗಳಲ್ಲಿ ಕಡಿಮೆಯಾಗಲಿವೆ. ಅದಕ್ಕಾಗಿ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಭೆಗಳು ನಡೆದು ಮೊಬೈಲ್ ಆ್ಯಪ್ ಮೂಲಕ ಸರ್ವೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಜಮೀನು ಮಾರಾಟವಾದ ಸಂದರ್ಭದಲ್ಲಿ ಅಥವಾ ವಿಭಜನೆ ಸಂದರ್ಭದಲ್ಲಿ ಸರ್ವೆ ಮಾಡಿಸಿ ಭಾಗ ಮಾಡಿಕೊಳ್ಳುವುದು ಬಹುದೊಡ್ಡ ಸಮಸ್ಯೆ. ಮೊಬೈಲ್ ಆ್ಯಪ್ ಸರ್ವೆ ಮೂಲಕ ಆ ಸಮಸ್ಯೆಗೂ ಮುಕ್ತಿ ಸಿಗಲಿದೆ.
ಹಳೇ ವ್ಯವಸ್ಥೆ ಅಬಾಧಿತ: ಯಾವುದಾದರೂ ವಿರೋಧ ವ್ಯಕ್ತವಾದರಷ್ಟೇ ಸರ್ವೆಯರ್ಗಳ ಮೂಲಕವೂ ಸರ್ವೆ ಮಾಡಿಸಿಕೊಳ್ಳಬಹುದು. ಆ ವ್ಯವಸ್ಥೆ ಮುಂದುವರಿಯುತ್ತದೆ. ಶುಲ್ಕ ಕಟ್ಟಿ ಸರ್ವೆಯರ್ಗಳು ಬಂದಾಗ ಸರ್ವೆ ಆಗುತ್ತದೆ. ಗುರುತಿನ ಚೀಟಿ
ಕಡ್ಡಾಯ: ಮೊಬೈಲ್ ಆ್ಯಪ್ನಲ್ಲಿ ಸರ್ವೆ ಮಾಡಿಕೊಳ್ಳಲು ಆಧಾರ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಸರ್ವೆ ಮಾಡಿಕೊಳ್ಳುವ ಇಬ್ಬರು ಮಾಲೀಕರ ಆಧಾರ್ ನಂಬರ್ ಬೇಕಾಗುತ್ತದೆ. ಇಲ್ಲದಿದ್ದರೆ ಭೂಮಿಯ ಸ್ಕೆಚ್ ಮೊಬೈಲ್ನಲ್ಲಿ ಬರುವುದಿಲ್ಲ ಹಾಗೂ ಸಮೀಕ್ಷೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಸರ್ವೆಯನ್ನು ಡಿಜಿಟಲೈಸ್ ಮಾಡುವುದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಸಾಕಷ್ಟು ಸಭೆ ಮಾಡಿದ್ದಾರೆ. ಶೀಘ್ರದಲ್ಲೇ ಆ್ಯಪ್ ಸಿದ್ಧವಾಗುವ ನಿರೀಕ್ಷೆ ಇದೆ. ಆ ನಂತರ ಜನವರಿಯಲ್ಲಿ ಸಾರ್ವಜನಿಕ ಬಳಕೆಗೆ ನೀಡುವ ಉದ್ದೇಶ ಹೊಂದಿದ್ದೇವೆ. | ಆರ್. ಅಶೋಕ್ ಕಂದಾಯ ಸಚಿವ
ನಕ್ಷೆಯೂ ಸಿಗಲಿದೆ: ಮೊಬೈಲ್ ಆ್ಯಪ್ನಲ್ಲಿ ಸರ್ವೆ ಮಾಡಿದ ನಂತರ ಭೂಮಿಯ ಸ್ಕೆಚ್ ಪಡೆಯುವ ವ್ಯವಸ್ಥೆಯೂ ಇರುತ್ತದೆ. ಅದಕ್ಕೂ ಶುಲ್ಕ ನಿಗದಿ ಮಾಡಲಾಗುತ್ತದೆ.
ಅವರ ಭೂಮಿಯನ್ನು ಅವರೇ ಸರ್ವೆ ಮಾಡಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಅಪ್ಲಿಕೇಷನ್ ಸಿದ್ಧವಾಗುತ್ತಿದೆ. ಏನಾದರೂ ತಕರಾರು ಇದ್ದಾಗ ಮಾತ್ರ ಸರ್ವೆಯರ್ ಬಂದು ಸರ್ವೆ ಮಾಡಬೇಕು ಅಷ್ಟೆ. ಮೂರು ತಿಂಗಳಿನಲ್ಲಿ ಸಿದ್ಧವಾಗಲಿದೆ. | ಮನೀಷ್ ಮೌದ್ಗಿಲ್ ಭೂ ಸರ್ವೆ ಆಯುಕ್ತ
ಶುಲ್ಕವೂ ಇದೆ: ಸರ್ವೆಯರ್ ಸರ್ವೆ ಮಾಡಿಕೊಡುವುದಕ್ಕೆ ಹೇಗೆ ಶುಲ್ಕ ಪಾವತಿಸಬೇಕೋ ಅದೇ ರೀತಿ ಮೊಬೈಲ್ ಆಪ್ ಮೂಲಕ ಸರ್ವೆಗೂ ಶುಲ್ಕ ಕಟ್ಟಬೇಕಾಗುತ್ತದೆ. ಆದರೆ ಶುಲ್ಕ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ. ಜನವರಿ ವೇಳೆಗೆ ಜಾರಿ ಗೊಳಿಸುವ ಸಂದರ್ಭದಲ್ಲಿ ಶುಲ್ಕ ನಿಗದಿಯಾಗುತ್ತದೆ.
ಹೇಗಿರಲಿದೆ ವ್ಯವಸ್ಥೆ?: ಈಗ ಮೊಬೈಲ್ನಲ್ಲಿ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಭೂ ಸರ್ವೆ ಇಲಾಖೆ ಸಿದ್ಧಪಡಿಸುವ ಆಪ್ ಡೌನ್ಲೋಡ್ ಮಾಡಿಕೊಂಡು ಸರ್ವೆ ಮಾಡಿಕೊಳ್ಳಬಹುದು. ಮೊಬೈಲ್ ಅಪ್ಲಿಕೇಷನ್ನಲ್ಲಿ ಭೂಮಿಯ ಸರ್ವೆ ನಂಬರ್ ಹಾಕುತ್ತಿದ್ದಂತೆ ಸೆಟಲೈಟ್ ಮೂಲಕ ಚಿತ್ರಿಸಿರುವ ಭೂಮಿಯ ಸ್ಕೆಚ್ ಬರುತ್ತದೆ. ವೈಯಕ್ತಿಕವಾದ ಕೆಲವು ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಯಾರಿಗೆ ಎಷ್ಟು ಎಕರೆ ಎಂಬುದರ ಗಡಿಯನ್ನು ಗುರುತಿಸಬಹುದು. ಭೂಮಿ ಖರೀದಿ ಮಾಡಿದವರು,ಮಾರಾಟಗಾರ ಅಥವಾ ಭೂಮಿ ಹಂಚಿಕೊಳ್ಳುವ ಅಣ್ಣ-ತಮ್ಮಂದಿರು ಕುಳಿತು ಮೊಬೈಲ್ ಆಪ್ ಮೂಲಕ ಗಡಿ ಗುರುತಿಸಿಕೊಳ್ಳಬಹುದು. ಆ ನಂತರ ಪೋಡಿ ಮಾಡಿಕೊಂಡು ಬದು ನಿರ್ಮಾಣ ಮಾಡಿಕೊಳ್ಳಬಹುದು. ಇಬ್ಬರು ಮಾಲೀಕರ ನಡುವೆ ಯಾವುದೇ ವಿರೋಧ ಇಲ್ಲವೆಂದಾದರೆ ಮೊಬೈಲ್ನಲ್ಲಿ ಮಾಡುವ ಸರ್ವೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಮೊಬೈಲ್ನಲ್ಲೇ ಮನವಿ: ಸರ್ವೆಯರ್ಗಳಿಂದ ಸರ್ವೆ ಮಾಡಿಸುವುದಕ್ಕೂ ಮೊಬೈಲ್ ಮೂಲಕವೇ ಅರ್ಜಿ ಹಾಕುವ ವ್ಯವಸ್ಥೆಯನ್ನು ಸಹ ಜಾರಿಗೆ ತರಲಾಗುತ್ತದೆ. ಈ ವ್ಯವಸ್ಥೆಯನ್ನು ಇಡೀ ರಾಜ್ಯದಲ್ಲಿ ಏಕ ಕಾಲಕ್ಕೆ ಜಾರಿಗೆ ತರಲಾಗುತ್ತದೆ. ಪ್ರಾಯೋಗಿಕ ವ್ಯವಸ್ಥೆ ಇರುವುದಿಲ್ಲ. ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಸಮಸ್ಯೆಗಳು ಬಂದಲ್ಲಿ ತಕ್ಷಣ ಸರಿಪಡಿಸಲಾಗುತ್ತದೆ. ನಿಧಾನವಾಗಿ ಸಾಂಪ್ರದಾಯಿಕ ವ್ಯವಸ್ಥೆಯನ್ನು ಸಂಪೂರ್ಣ ತೆಗೆದುಹಾಕಿ ಡಿಜಿಟಲ್ ವ್ಯವಸ್ಥೆ ತರುವುದು ಸರ್ಕಾರದ ಉದ್ದೇಶವಾಗಿದೆ. ಭೂ ಸರ್ವೆ ಸಹ ಪೇಪರ್ಲೆಸ್ ಆಗಬೇಕು ಎಂಬುದು ಸರ್ಕಾರದ ಆಶಯವಾಗಿದೆ.