ನ್ಯೂಸ್

ಸಿನಿಮಾ ಮಧ್ಯೆ ದಿಢೀರ್​ ಎದ್ದೋದ್ರೂ ಸಿಗುತ್ತೆ ಹಣ! ಪಿವಿಆರ್, ಐನಾಕ್ಸ್​ನಿಂದ ಸಿನಿಪ್ರಿಯರಿಗೆ ಗುಡ್​ ನ್ಯೂಸ್​ | Refund

ಮೋಹನ್​ ಶೆಟ್ಟಿ

PVR Inox: ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗ ಸೇರಿದಂತೆ ಹಾಲಿವುಡ್​ನ ವಿವಿಧ ಜಾನರ್​ನ ಸಿನಿಮಾಗಳು ಪ್ರತಿವಾರ ತೆರೆಗೆ ಅಪ್ಪಳಿಸುತ್ತಿದೆ. ಪ್ರಮುಖ ಭಾಷೆಗಳ ಚಿತ್ರಗಳ ಪಟ್ಟಿಯಲ್ಲಿ ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಲು ಐನಾಕ್ಸ್​, ಪಿವಿಆರ್​ನಂತಹ ಮಲ್ಟಿಪ್ಲೆಕ್ಸ್​ನತ್ತ ಹೆಚ್ಚು ಮುಖ ಮಾಡುವ ಪ್ರೇಕ್ಷಕರು, ತಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜತೆ ಸಿನಿಮಾ ನೋಡಲು ಬಯಸುತ್ತಾರೆ. ಹೀಗಾಗಿ ಅಧಿಕ ಸಂಖ್ಯೆಯ ಟಿಕೆಟ್​ಗಳನ್ನು ಒಂದು ವಾರ ಅಥವಾ ಮೂರ್ನಾಲ್ಕು ದಿನಗಳ ಮುಂಚಿತವಾಗಿಯೇ ಆನ್​ಲೈನ್ ಮೂಲಕ ಬುಕ್ ಮಾಡಿ ವೀಕ್ಷಿಸುತ್ತಾರೆ. ಚಿತ್ರಮಂದಿರಕ್ಕಿಂತ ದುಪ್ಪಟ್ಟು ಹಣ ಕೊಟ್ಟು ಚಿತ್ರ ನೋಡಲು ಬಂದರೆ, ಏನಾದರೂ ಒಂದು ಕಾರಣಕ್ಕೆ ಅರ್ಧಕ್ಕೆ ಎದ್ದು ಹೋಗುಂತಹ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ನಷ್ಟ ಅನುಭವಿಸುವ ಪ್ರೇಕ್ಷಕರು, ಇತ್ತ ಹಣವು ಸಿಗದೆ (Refund), ಚಿತ್ರವನ್ನು ನೋಡಲಾಗದೆ ಸಪ್ಪೆ ಮುಖದಲ್ಲಿ ಮನೆಗೆ ಹಿಂತಿರುಗುತ್ತಾರೆ. ಅಂಥವರಿಗೆ ಈ ಸುದ್ದಿ ಮಂದಹಾಸ ಮೂಡಿಸಲಿದೆ.

ಪ್ರಸ್ತುತ ಭಾರತದಲ್ಲಿ ಮುಂಚೂಣಿಯಲ್ಲಿರುವ ಪಿವಿಆರ್, ಐನಾಕ್ಸ್ ತಮ್ಮ ಮಲ್ಟಿಪ್ಲೆಕ್ಸ್​ಗೆ ಬರುವ ಪ್ರೇಕ್ಷಕರಿಗೆ ನಷ್ಟ ಉಂಟಾಗದಿರಲು ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ. ಅದೇನೆಂದರೆ, ಜಿಎಸ್​ಟಿ ಮತ್ತು ಇಂಟರ್​ನೆಟ್​ ಸೇವೆಯ ಹಣವನ್ನು ಸೇರಿಸಿ ಟಿಕೆಟ್ ಕೊಡುವ ಈ ಸಂಸ್ಥೆಗಳು, ಸಿನಿಮಾ ನೋಡುವ ಮಧ್ಯೆ ಸಿನಿಪ್ರಿಯರು ಕಾರಣಾಂತರಗಳಿಂದ ಅರ್ಧಕ್ಕೆ ಎದ್ದು ಹೋದರೆ ಅವರಿಗೆ ಪಾವತಿ ಮಾಡಿದ ಅರ್ಧದಷ್ಟು ಮೊತ್ತವನ್ನು ಕೊಡಲು ಚಿಂತನೆ ನಡೆಸಿದೆ. ಇದನ್ನು ಶೀಘ್ರವೇ ಪ್ರಾರಂಭಿಸುವುದಾಗಿಯೂ ಘೋಷಿಸಿದೆ.

ಎದ್ದ ಸಮಯಕ್ಕೆ ತಕ್ಕಂತೆ ಹಣವೇ?

ಹೌದು, ಫ್ಲೆಕ್ಸಿ ಶೋ ಮೂಲಕ ಸಿನಿಮಾ ಪ್ರೇಕ್ಷಕರು ಚಿತ್ರ ವೀಕ್ಷಿಸುವಾಗ ದಿಢೀರ್​ ಎದ್ದು ಹೋಗಬೇಕು ಎಂಬ ಸಂದರ್ಭ ಎದುರಾದರೆ, ಅವರು ಯಾವ ಸಮಯಕ್ಕೆ ಚಿತ್ರದ ರನ್​​ಟೈಮ್​ನಿಂದ ಹೊರಬಂದರು ಎಂಬುದು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಫ್ಲೆಕ್ಸಿ ಶೋ ಎಐ ತಂತ್ರಜ್ಞಾನದಡಿ ಕಾರ್ಯನಿರ್ವಹಿಸಲಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್ ಕ್ಯೂಆರ್ ಕೋಡ್ ಸ್ಕ್ಯಾನ್‌ಗಳೊಂದಿಗೆ ಪ್ರಾರಂಭವಾಗುವ ತಡೆರಹಿತ ವಹಿವಾಟನ್ನು ಖಾತ್ರಿಗೊಳಿಸಲಿದೆ. ಮಲ್ಟಿಪ್ಲೆಕ್ಸ್​ನೊಳಗೆ ಅಳವಡಿಸಲಾಗಿರುವ ಕ್ಯಾಮರಾಗಳು ಪ್ರೇಕ್ಷಕರ ಬರುವಿಕೆ ಮತ್ತು ಮಧ್ಯೆದಲ್ಲಿ ಎದ್ದು ಹೋದರೆ, ಆ ಸಮಯವನ್ನು ನಿಖರವಾಗಿ ಸೂಚಿಸುತ್ತದೆ. ಇದರ ಆಧಾರದ ಮೇರೆಗೆ ಪ್ರೇಕ್ಷಕರಿಗೆ ಹಣ ಮರುಪಾವತಿ ಮಾಡಲಾಗುವುದು.

ಕ್ಯಾಮರಾ ಕಣ್ಣಿನ ಸಹಾಯ

ಈ ಕ್ಯಾಮರಾಗಳು ಆಸನದ ಆಕ್ಯುಪೆನ್ಸಿಯನ್ನು 99% ನಿಖರತೆಯೊಂದಿಗೆ ಮೌಲ್ಯೀಕರಿಸುತ್ತವೆ. ಇವು ಮಲ್ಟಿಪ್ಲೆಕ್ಸ್​ನ ನಿರ್ದಿಷ್ಟ ಕುರ್ಚಿಗಳು ಖಾಲಿಯಿವೆಯೇ ಅಥವಾ ಆಕ್ರಮಿತಗೊಂಡಿವೆಯೇ ಎಂಬುದನ್ನು ಗುರುತಿಸುತ್ತವೆ. ಸಿಸ್ಟಮ್ ಈ ಡೇಟಾವನ್ನು ನೈಜ ಸಮಯದಲ್ಲಿ ಪ್ರಕ್ರಿಯೆಗೊಳಿಸುತ್ತದೆ. ಪ್ರೇಕ್ಷಕರು ಅನಿವಾರ್ಯ ಕಾರಣಗಳಿಂದ ಸಿನಿಮಾದಿಂದ ಅರ್ಧಕ್ಕೆ ಹೊರನಡೆದರೆ ತಂತ್ರಜ್ಞಾನದ ಸಹಾಯದಿಂದ ಎಷ್ಟು ಹಣ ಹಿಂತಿರುಗಿಸಬೇಕು ಎಂಬುದನ್ನು ಪರಿಶೀಲಿಸಿ, ಆನಂತರ ತಿಳಿಸುತ್ತದೆ.

ಹೇಗೆ ಅನ್ವಯ?

ಫ್ಲೆಕ್ಸಿ ಟಿಕೆಟಿಂಗ್ ಮಾದರಿಯು ಸಮಯ ಆಧಾರಿತ ಮರುಪಾವತಿ ವ್ಯವಸ್ಥೆಯನ್ನು ಪರಿಚಯಿಸಿದ್ದು, ಪ್ರೇಕ್ಷಕರು ಸಿನಿ ಅನುಭವದ ಮಧ್ಯೆ ಹೊರ ಹೋಗಲು ನಿರ್ಧರಿಸಿದಾಗ ಚಿತ್ರ ಶೇ. 75ರಷ್ಟು ಬಾಕಿ ಇರುವ ಮುನ್ನವೇ ಹೊರಬಂದರೆ 60% ಹಣ ವಾಪಾಸ್​. 50-75% ಉಳಿದಿದ್ದರೆ, ಶೇ.50ರಷ್ಟು ಮರುಪಾವತಿ. ಅದೇ 25-50% ಬಾಕಿ ಇದ್ದರೆ, 30% ಹಣ ರಿಫಂಡ್ ಮಾಡಲಾಗುವುದು. ತುರ್ತುಸ್ಥಿತಿ, ಕೆಲಸದ ನಿಮಿತ್ತ ಅಥವಾ ಇತರೆ ಕಾರಣಗಳಿರಲಿ ತಮ್ಮ ಗ್ರಾಹಕರಿಗೆ ಟಿಕೆಟ್​ ಹಣ ಬೇಸರಕ್ಕೆ ಕಾರಣವಾಗಬಾರದು ಎಂಬುದನ್ನು ಸಂಸ್ಥೆ ತನ್ನ ಹೇಳಿಕೆಯಲ್ಲಿ ಒತ್ತಿ ಹೇಳಿದೆ.

ಸದ್ಯದ ಮಟ್ಟಿಗೆ ದೆಹಲಿ ಮತ್ತು ಗುರ್‌ಗಾಂವ್‌ನ 40 ಚಿತ್ರಮಂದಿರಗಳಲ್ಲಿ ಫ್ಲೆಕ್ಸಿ ಶೋ ಮೂಲಕ ಪ್ರಯೋಗ ನಡೆಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದೆ? ಎಷ್ಟು ಬೇಗ ಜಾರಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).