

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಹಾಗೂ ಆರೈಕೆಗೆ ಅತ್ಯಾಧುನಿಕ ಸೌಲಭ್ಯಗಳ ಅಗತ್ಯವಿರುವುದನ್ನು ಮನಗಂಡು ಆಸ್ಪತ್ರೆ ನಿರ್ಮಿಸಲಾಯಿತು. ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡಿ ಸಮಾಜದ ಆರೋಗ್ಯ ರಕ್ಷಣೆಗೆ ಸದಾ ಬದ್ಧ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಗುರುವಾರ ಸ್ವಾಗತಿಸಿ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೇಡಿಯೋ ಆಂಕೊಲಾಜಿ ಚಿಕಿತ್ಸಾ ಕೇಂದ್ರ ಮತ್ತು ಅಸ್ಥಿಮಜ್ಜೆ ಕಸಿ, ಜೀನೋಮಿಕ್ ಔಷಧ ಆಧಾರಿತ ಕ್ಯಾನ್ಸರ್ ಆರೈಕೆ ಸೇರಿ ವಿವಿಧ ವಿಭಾಗಗಳನ್ನು ತೋರಿಸಿದರು. ಮುಂಬರುವ ದಿನಗಳಲ್ಲಿ ಸರ್ಕಾರದ ಸಹಯೋಗದೊಂದಿಗೆ ಕ್ಯಾನ್ಸರ್ ಚಿಕಿತ್ಸೆ ಹಾಗೂ ಆರೈಕೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ರಾಜ್ಯಾದ್ಯಂತ ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆ ಬಲಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಡಾ. ಶಾಲಿನಿ ರಜನೀಶ್ ಮಾತನಾಡಿ, ಕರ್ನಾಟಕದಾದ್ಯಂತ ಕ್ಯಾನ್ಸರ್ ಆರೈಕೆ ಸೌಲಭ್ಯ ಮೇಲ್ದರ್ಜೆಗೇರಿ, ವಿಶ್ವ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಡಾ. ಪ್ರಭಾಕರ ಕೋರೆ ಅವರು ಬೆಳಗಾವಿಯನ್ನು ಹೆಲ್ತಕೇರ್ ಹಬ್ ಆಗಿ ಪರಿವರ್ತಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಂ.ವಿ. ಜಾಲಿ ಇತರರು ಇದ್ದರು.