ನ್ಯೂಸ್

10 ಲಕ್ಷ ರೂ. ಮೌಲ್ಯದ ಪುಸ್ತಕ ಖರೀದಿಸಿದ ಪವನ್ ಕಲ್ಯಾಣ್​! ಡಿಸಿಎಂ ಖರೀದಿ ಹಿಂದಿದೆ ಈ ಉದ್ದೇಶ | Books

Pawan Kalyan: ಟಾಲಿವುಡ್​ನ ಪವರ್​ಸ್ಟಾರ್​, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ವಿಜಯವಾಡದ ಇಂದಿರಾಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ 10 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು (Books) ಖರೀದಿಸಿದರು. ಪುಸ್ತಕ ಮೇಳಕ್ಕೆ ಆಗಮಿಸುವ ಕುರಿತು ಮಾಧ್ಯಮವದರಿಗೆ ಮಾಹಿತಿ ನೀಡದ ಡಿಸಿಎಂ, ಸದ್ದಿಲ್ಲದೇ ಮೇಳಕ್ಕೆ ಬಂದು ಅಪಾರ ಪುಸ್ತಕಗಳನ್ನು ಖರೀದಿಸಿ, ತಮ್ಮ ಕಚೇರಿಯಲ್ಲಿ ಇರಿಸಿದ್ದಾರೆ.

ಪುಸ್ತಕ ಮತ್ತು ಸಾಹಿತ್ಯದ ಪ್ರೀತಿಗೆ ಹೆಸರುವಾಸಿಯಾಗಿರುವ ಪವನ್ ಕಲ್ಯಾಣ್, ಕೆಲ ಸಮಯ ಮೇಳದ ಆಯೋಜಕರೊಂದಿಗೆ ಪುಸ್ತಕ ಸಂತೆಯ ಬಗ್ಗೆ ಮಾತನಾಡಿದರು. ನಂತರ ಹಲವಾರು ಪುಸ್ತಕಗಳತ್ತ ಕಣ್ಣಾಡಿಸಿದ ಡಿಸಿಎಂ, 10 ಲಕ್ಷ ರೂ.ವರೆಗಿನ ಬುಕ್​ಗಳನ್ನು ಆಯ್ಕೆ ಮಾಡಿ, ಅದರ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್​ ಖಾತೆಯಿಂದ ಪಾವತಿ ಮಾಡಿದ್ದಾರೆ.

ನಿನ್ನೆ (ಜ.10) ಪಿಠಾಪುರಂಗೆ ಭೇಟಿ ನೀಡಿದ್ದ ಪವನ್ ಕಲ್ಯಾಣ್, ಅಲ್ಲಿ ಇತ್ತೀಚಿನ ಹಾಗೂ ಹೊಸ ಸೌಲಭ್ಯಗಳನ್ನು ಹೊಂದಿರುವ ಗ್ರಂಥಾಲಯವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಮೇಳದಲ್ಲಿ 10 ಲಕ್ಷ ರೂ. ಕೊಟ್ಟು ಪುಸ್ತಕಗಳನ್ನು ಈ ಗ್ರಂಥಾಲಯಕ್ಕಾಗಿಯೇ ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಪವನ್ ಕಲ್ಯಾಣ್, "ಪುಸ್ತಕಗಳನ್ನು ಓದುವುದರಿಂದ ನನ್ನಲ್ಲಿ ಹಲವು ಬದಲಾವಣೆಗಳಾಗಿವೆ. ತಮ್ಮ ಕ್ಷೇತ್ರದ ಯುವಕರು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು" ಎಂದು ಹೇಳಿದರು,(ಏಜೆನ್ಸೀಸ್).