ನ್ಯೂಸ್

ಸಂಸತ್ ಭದ್ರತಾ ಲೋಪ: ಮಾಸ್ಟರ್​​ಮೈಂಡ್​ ಕೈಯಲ್ಲಿತ್ತು ಆರೋಪಿಗಳ ಫೋನ್! ಸುಳಿವು ಸಿಗದಿರಲು ಈತ ಮಾಡಿದ್ದೇನು ಗೊತ್ತಾ?

ಹೊಸದಿಲ್ಲಿ: ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಬಂಧಿಸಿರುವ ದೆಹಲಿ ಪೊಲೀಸರು, ಇದೀಗ ಆರೋಪಿಗಳ ಸುಟ್ಟ ಫೋನ್​ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಎಲ್ಲ ಆರೋಪಿಗಳನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಇಬ್ಬರು ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್, ಸಂಸತ್ತಿನ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಹಳದಿ ಅನಿಲ ಹೊಗೆಯನ್ನು ಎಸೆದು, ಘೋಷಣೆಗಳನ್ನು ಕೂಗಿದ್ದರು. ಇದೀಗ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಭಾನುವಾರ (ಡಿ.17) ಸಂಸತ್ತಿನ ಭದ್ರತಾ ಉಲ್ಲಂಘನೆಯಲ್ಲಿ ಆರೋಪಿಗಳ ಮೊಬೈಲ್ ಫೋನ್‌ಗಳು, ಬಟ್ಟೆಗಳು ಮತ್ತು ಶೂಗಳ ಸುಟ್ಟ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳ ಎಲ್ಲಾ ಫೋನ್‌ಗಳು ಮಾಸ್ಟರ್ ಮೈಂಡ್ ಲಲಿತ್ ಝಾ ಇಟ್ಟುಕೊಂಡಿದ್ದ, ತದನಂತರ ಮೊದಲು ಫೋನ್​ಗಳನ್ನು ಒಡೆದು ಬಳಿಕ ಬೆಂಕಿ ಹಚ್ಚಿ, ಸುಟ್ಟು ಹಾಕಿದ್ದಾನೆ ಎಂದು ವರದಿ ತಿಳಿಸಿವೆ,(ಏಜೆನ್ಸೀಸ್).