ನವದೆಹಲಿ: ಸಾಮಾನ್ಯವಾಗಿ ಮಳೆಗಾಲದ ಸಂಸತ್ ಅಧಿವೇಶನ ಜೂನ್ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಈ ಸಲದ ಅಧಿವೇಶನ ನಡೆಯುವುದು ಬಿಡುವುದು ಕರೊನಾ ಹಾವಳಿಯ ತೀವ್ರತೆಯ ಮೇಲೆ ಅವಲಂಬಿತವಾಗಿದೆ.
ಅಧಿವೇಶನ ನಡೆಸಬೇಕು ಎಂಬ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ ಜೂನ್ ಅಂತ್ಯದ ವೇಳೆಗೆ ಭಾರತದಲ್ಲಿ ಕರೊನಾ ವೈರಾಣು ಸೋಂಕಿತರ ಸಂಖ್ಯೆ ಯಾವ ಪ್ರಮಾಣದಲ್ಲಿ ಇರುತ್ತದೆ ಎಂಬುದೂ ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ದೈಹಿಕ ಅಂತರದ ಕ್ರಮಗಳನ್ನು ಶಿಸ್ತಾಗಿ ಪಾಲಿಸಿ ಅಧಿವೇಶನ ನಡೆಸಬಹುದು ಎಂಬ ಯೋಚನೆ ಕೇಂದ್ರ ಸರ್ಕಾರಕ್ಕೆ ಇದ್ದರೂ, ಇದಕ್ಕೆ ವಿರೋಧ ಪಕ್ಷಗಳ ನಾಯಕರು ಒಪ್ಪುತ್ತಾರೆಯೇ ಎಂಬುದೂ ಮುಖ್ಯವಾಗಿದೆ. ಏಕೆಂದರೆ, ಸಂಸದ ಅಥವಾ ಅವರ ಆಪ್ತರಲ್ಲಿ ಯಾರಿಗಾದರೂ ಸೋಂಕು ತಗುಲಿದಲ್ಲಿ ವಿರೋಧ ಪಕ್ಷಗಳ ನಾಯಕರು ಅದನ್ನೇ ಕೇಂದ್ರದ ವಿರುದ್ಧ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸುವ ಸಾಧ್ಯತೆಗಳಿವೆ.
ಹೀಗಾಗಿ, ಕೇಂದ್ರ ಸರ್ಕಾರ ನೇರವಾಗಿ ರಿಸ್ಕ್ ತೆಗೆದುಕೊಳ್ಳುವ ಬದಲು ವಿರೋಧ ಪಕ್ಷಗಳ ಜತೆ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳಬಹುದು.
ಈ ಮಧ್ಯೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಓಂ ಬಿರ್ಲಾ, ‘‘ಕರೊನಾದ ತುರ್ತು ಆರೋಗ್ಯ ಸ್ಥಿತಿಯಿದ್ದರೂ, ಸೂಕ್ತ ಸಮಯಕ್ಕೆ ಮುಂಗಾರು ಅಧಿವೇಶನ ನಡೆಯಬಹುದು ಎಂಬ ಆಶಾಭಾವ ಹೊಂದಿದ್ದೇನೆ. ಹಾಗಿದ್ದರೂ, ಆಗಿನ ಸನ್ನಿವೇಶ ಹೇಗಿರಲಿದೆ ಎಂಬುದೂ ಮುಖ್ಯ’’ ಎಂದು ಹೇಳಿದ್ದಾರೆ. ಕಳೆದ ವರ್ಷ ಜೂನ್ 17ರಂದು ಮಳೆಗಾಲದ ಅಧಿವೇಶನ ಪ್ರಾರಂಭವಾಗಿತ್ತು.