ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಆರಂಭವಾಗಿ ಆಗಸ್ಟ್ 11ರವರೆಗೆ ನಡೆಯಲಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು (ಜುಲೈ 1) ತಿಳಿಸಿದ್ದಾರೆ.
ಬಹುಶಃ ಮುಂಗಾರು ಅಧಿವೇಶನ ಹಳೆಯ ಸಂಸತ್ ಕಟ್ಟಡದಲ್ಲಿ ಆರಂಭವಾಗಿ, ಮಧ್ಯದಲ್ಲಿ ನೂತನ ಸಂಸತ್ ಭವನಕ್ಕೆ ಸ್ಥಳಾಂತರವಾಗು ಸಾಧ್ಯತೆ ಇದೆ. ಒಂದು ವೇಳೆ ಈ ರೀತಿ ನಡೆದರೆ, ಹೊಸ ಸಂಸತ್ ಭವನದಲ್ಲಿ ನಡೆಯುವ ಮೊದಲ ಅಧಿವೇಶ ಇದೇ ಆಗಿರಲಿದೆ.
ದಿನಾಂಕವನ್ನು ಘೋಷಣೆ ಮಾಡಿದ ಪ್ರಲ್ಹಾದ್ ಜೋಶಿ ಅವರು, ಅಧಿವೇಶನದಲ್ಲಿ ಅಭಿವೃದ್ಧಿ ಪರ ಚರ್ಚೆಗಳಿಗೆ ರಾಜಕೀಯ ಪಕ್ಷಗಳು ಕೊಡುಗೆ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ಪ್ಲ್ಯಾನ್: ಬಗೆದಷ್ಟು ಬಯಲಾಗ್ತಿದೆ ಅಜಿತ್ ರೈ ಅಕ್ರಮ
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಕಣಕ್ಕಿಳಿಯಲು ಪ್ರತಿಪಕ್ಷಗಳು ಕಸರತ್ತು ನಡೆಸುತ್ತಿರುವುದರಿಂದ ಈ ಅಧಿವೇಶನ ತುಂಬಾ ಬಿರುಸು ಪಡೆದುಕೊಳ್ಳುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳುವ ಸಾಧ್ಯತೆ ಇದೆ. ಅಲ್ಲದೆ, ಈಗಾಗಲೇ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಅಧಿವೇಶನ ಆರಂಭವಾಗುತ್ತಿರುವುದರಿಂದ ಸಂಸತ್ತಿನಲ್ಲಿ ನಾಗರಿಕ ಸಂಹಿತೆ ಕಾವು ಹೆಚ್ಚಾಗುವ ಲಕ್ಷಣಗಳಿವೆ.
ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡಿರುವ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ ಸೇರಿದಂತೆ ಹಲವು ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)