ನ್ಯೂಸ್

ಬಂದಿದೆ ಹೊಸ ಆಪತ್ತು... ಮಕ್ಕಳ ವರ್ಚುಯಲ್​ ಅಪಹರಣದ ಕರಾಮತ್ತು... ಪಾಲಕರೇ ಎಚ್ಚರ!

vinaymk1969

ನವದೆಹಲಿ: ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಆನ್​ಲೈನ್​ ಶಿಕ್ಷಣ ಎಂಬ ಹೊಸ ಪದ್ಧತಿಯ ಬೋಧನೆ ಆರಂಭವಾಗಿದೆ. ತಮ್ಮ ಉದ್ಯೋಗಸ್ಥ ಪಾಲಕರ ಅನುಪಸ್ಥಿತಿಯಲ್ಲಿ ಮಕ್ಕಳು ಮೊಬೈಲ್​ಗಳ ಮೂಲಕ ಸದಾ ಆನ್​ಲೈನ್​ನಲ್ಲೇ ಇರುವುದು ಅನಿವಾರ್ಯವಾಗಿದೆ. ಜತೆಗೆ ತಂತ್ರಜ್ಞಾನವನ್ನು ಬಳಸಿಕೊಂಡು ದೂರ, ದೂರದಲ್ಲಿರುವ ಸ್ನೇಹಿತರ ಜತೆಗೆ ಆನ್​ಲೈನ್​ ಗೇಮ್ಸ್​ ಆಡುವುದು, ಫೇಸ್​ಬುಕ್​ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್​ ಮಾಡುವುದು, ಫೋಟೋಗಳನ್ನು ಹಾಕಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಇದು ಸೈಬರ್​ ಕ್ರೈಂ ದುಷ್ಕರ್ಮಿಗಳಿಗೆ ಮಕ್ಕಳನ್ನು ವರ್ಚುಯಲ್​ ಆಗಿ ಅಪಹರಿಸಲು ಭರಪೂರ ಅವಕಾಶ ಮಾಡಿಕೊಡುತ್ತಿದೆ.

ವರ್ಚುಯಲ್​ ಅಪಹರಣ: ಇದುವರೆಗೂ ಮಕ್ಕಳನ್ನು ಭೌತಿಕವಾಗಿ ಅಪಹರಿಸುತ್ತಿದ್ದ ದುಷ್ಕರ್ಮಿಗಳು ಒತ್ತೆಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಆದರೆ ಹೊಸ ಬಗೆಯ ತಂತ್ರಜ್ಞಾನದಿಂದಾಗಿ ಮಕ್ಕಳನ್ನು ವರ್ಚುಯಲ್​ ಆಗಿ ಅಪಹರಿಸಿ, ಒತ್ತೆಹಣಕ್ಕೆ ಬೇಡಿಕೆ ಇಡಲು ದುಷ್ಕರ್ಮಿಗಳಿಗೆ ಸುಲಭವಾಗಿದೆ.

ವರ್ಚುಯಲ್​ ಅಪಹರಣ ಹೇಗೆ?: ಉದ್ಯೋಗಸ್ಥ ದಂಪತಿಗಳು ತಮ್ಮ ಮಕ್ಕಳಿಗೆ ಆನ್​ಲೈನ್​ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಸ್ಮಾರ್ಟ್​ಫೋನ್​ಗಳನ್ನು ಕೊಟ್ಟಿರುತ್ತಾರೆ. ಆಗಾಗ್ಗೆ ಕರೆ ಮಾಡಿ, ಮಕ್ಕಳು ಆನ್​ಲೈನ್​ನಲ್ಲಿ ಪಾಠ ಕೇಳುತ್ತಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿರುತ್ತಾರೆ. ಇಲ್ಲವೇ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುತ್ತಿರುತ್ತಾರೆ.

ಆದರೆ, ಸೈಬರ್​ ಕ್ರೈಂ ಕಳ್ಳರು ತಂತ್ರಜ್ಞಾನದ ನೆರವು ಪಡೆದು ಮಕ್ಕಳ ಬಳಿಯಿರುವ ಫೋನ್​ಗೆ ಅಣಕು ಕರೆಗಳನ್ನು ಮಾಡುತ್ತಾರೆ. ಅವರ ಫೇಸ್​ಬುಕ್​ ಖಾತೆಗಳ ವಿವರಗಳನ್ನು ಪಡೆದುಕೊಂಡು ಅದರಲ್ಲಿರುವ ಅವರ ಫೋಟೋಗಳನ್ನು ಡೌನ್​ಲೋಡ್​ ಮಾಡಿಕೊಳ್ಳುತ್ತಾರೆ. ಬಳಿಕ ಆ ಫೋಟೋಗಳನ್ನು ತಿರುಚಿ, ಮಕ್ಕಳು ತಮ್ಮ ಬಳಿ ಇರುವಂತೆ ಬಿಂಬಿಸುತ್ತಾರೆ. ಮಕ್ಕಳನ್ನು ಮರಳು ಮಾಡಿ ಅವರೊಂದಿಗೆ ಒಡನಾಟ ಹೆಚ್ಚಿಸಿಕೊಳ್ಳುತ್ತಾರೆ. ಬಳಿಕ ಸಾಮಾಜಿಕ ಇಂಜಿನಿಯರಿಂಗ್​ ತಂತ್ರ ಬಳಸಿ, ಅಪ್ಪ ಅಥವಾ ಅಮ್ಮ ಯಾರೇ ಫೋನ್​ ಮಾಡಿದರೂ ಕರೆ ಸ್ವೀಕರಿಸದಂತೆ ಮಾಡುತ್ತಾರೆ. ಬಳಿಕ ಸಮಾಜಿಕ ಜಾಲತಾಣಗಳಿಂದ ಡೌನ್​ಲೋಡ್​ ಮಾಡಿಕೊಂಡು ತಿದ್ದಿರುವ ಫೋಟೋಗಳನ್ನು ಪಾಲಕರಿಗೆ ಕಳುಹಿಸಿ, ಮಕ್ಕಳ ಬಳಿಯಿರುವ ಮೊಬೈಲ್​ಫೋನ್​ ಅನ್ನು ಹ್ಯಾಕ್​ ಮಾಡಿ, ಆ ಫೋನ್​ನಿಂದಲೇ ಕರೆ ಮಾಡುತ್ತಿರುವಂತೆ ಬಿಂಬಿಸಿ ಒತ್ತೆಹಣಕ್ಕಾಗಿ ಬೇಡಿಕೆ ಇಡುತ್ತಾರೆ.

ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗದೆ, ಅವರ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಒಳಗಾಗುವ ಪಾಲಕರು ಸೈಬರ್​ ಕ್ರೈಂ ದುಷ್ಕರ್ಮಿಗಳು ಕೇಳಿದಷ್ಟು ಹಣವನ್ನು ಆನ್​ಲೈನ್​ ಮೂಲಕ ರವಾನಿಸಿ, ಮಕ್ಕಳೊಂದಿಗೆ ಮತ್ತೆ ಸಂಪರ್ಕ ಸಾಧಿಸಿಕೊಳ್ಳುತ್ತಾರೆ.

ಸದ್ಯ ಭಾರತದಲ್ಲಿ ಇದುವರೆಗೂ ಇಂಥ ಕೃತ್ಯಗಳು ನಡೆದಿಲ್ಲ. ಆದರೆ, ಭವಿಷ್ಯದಲ್ಲಿ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಇಂಥ ಸುಳ್ಳು ಕರೆಗಳಿಗೆ ಮಾರುಹೋಗಿ, ಅಪರಿಚಿತರೊಂದಿಗೆ ಒಡನಾಟ ಇಟ್ಟುಕೊಳ್ಳದ ರೀತಿ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ ಎಂದು ಮುಂಬೈ ಪೊಲೀಸರು ಸಲಹೆ ನೀಡಿದ್ದಾರೆ.

ಮಕ್ಕಳ ಆನ್​ಲೈನ್​ ಚಟುವಟಿಕೆ ಮೇಲೆ ಒಂದು ಕಣ್ಣಿಸಿರಿ, ಏನಾದರೂ ಸಣ್ಣ ವ್ಯತ್ಯಾಸ ಕಾಣಿಸಿದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿರಿ. ಅಪಹರಣಕಾರರು ನಿಜವಾಗಿಯೂ ನಿಮ್ಮ ಮಕ್ಕಳ ಬಳಿಯಿರುವ ಮೊಬೈಲ್​ಫೋನ್​ನಿಂದಲೇ ಫೋನ್​ ಮಾಡುತ್ತಿದ್ದಾರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಗ ವರ್ಚುಯಲ್​ ಅಪಹರಣವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಮುಂಬೈ ಪೊಲೀಸ್​ನ ಸೈಬರ್​ ಕ್ರೈಂ ಬ್ರ್ಯಾಂಚ್​ ಪೊಲೀಸರು ಸಲಹೆ ನೀಡಿದ್ದಾರೆ.