ನ್ಯೂಸ್

ಪ್ಲ್ಯಾಸ್ಟಿಕ್​ ಕಪ್​ನಷ್ಟೇ ಪೇಪರ್ ಕಪ್​ ಕೂಡ ಪರಿಸರಕ್ಕೆ ಹಾನಿಕರ; ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಪ್ಲ್ಯಾಸ್ಟಿಕ್​ ಕಪ್ ಬದಲು ಪೇಪರ್ ಕಪ್​ ಬಳಕೆ ಉತ್ತಮ, ಅದು ಪ್ಲ್ಯಾಸ್ಟಿಕ್​ ಕಪ್​ಗೆ ಪರ್ಯಾಯ ಎಂಬ ಅಭಿಪ್ರಾಯವಿದೆ. ಅದೇ ರೀತಿ ಪ್ಲ್ಯಾಸ್ಟಿಕ್ ಕಪ್​ಗಳಿಗೆ ಬದಲಾಗಿ ಪೇಪರ್ ಕಪ್​ಗಳ ಬಳಕೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ ಪರಿಸರಕ್ಕೆ ಪೇಪರ್​ ಕಪ್​ ಕೂಡ ಪ್ಲ್ಯಾಸ್ಟಿಕ್​ ಕಪ್​ನಷ್ಟೇ ಹಾನಿಕರ ಎಂಬುದು ಬಹಿರಂಗಗೊಂಡಿದೆ.

ಸ್ವೀಡನ್​ನ ಯುನಿವರ್ಸಿಟಿ ಆಫ್ ಗೊಥೆನ್​ಬರ್ಗ್ ನಡೆಸಿದ್ದ ಅಧ್ಯಯನವೊಂದರಲ್ಲಿ ಈ ವಿಷಯ ಕಂಡುಬಂದಿದೆ. ಬಳಸಿ ಎಸೆಯಬಹುದಾದ ಕಪ್​ಗಳ ದುಷ್ಪರಿಣಾಮಗಳ ಕುರಿತು ಬಟರ್​ಫ್ಲೈ ಮಾಸ್ಕಿಟೋಗಳ ಲಾರ್ವಾದ ಮೇಲೆ ನಡೆಸಿದ ಅಧ್ಯಯನದಲ್ಲಿ ಇದು ತಿಳಿದುಬಂದಿದೆ.

ನಾವು ಪೇಪರ್​ ಹಾಗೂ ಪ್ಲ್ಯಾಸ್ಟಿಕ್ ಕಪ್​ಗಳೆರಡನ್ನೂ ಒದ್ದೆಯಾದ ಕೆಸರು ಹಾಗೂ ಮಣ್ಣಿನಲ್ಲಿ ಇರಿಸಿ ಕೆಲವು ವಾರಗಳ ಕಾಲ ನೀರು ಹಾಕಿದ್ದೆವು. ಅಲ್ಲದೆ ಆ ಕಪ್​ಗಳಿಂದ ಬಿಡುಗಡೆ ಆದ ರಾಸಾಯನಿಕಗಳು ಲಾರ್ವಾಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನೂ ಗಮನಿಸಿದ್ದೆವು. ಎರಡೂ ಥರದ ಕಪ್​ಗಳು ಮಾಸ್ಕಿಟೋ ಲಾರ್ವಾದ ಬೆಳವಣಿಗೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಿರುವುದು ಕಂಡುಬಂದಿದೆ ಎಂದು ಯುನಿವರ್ಸಿಟಿ ಆಫ್​ ಗೊಥೆನ್​ಬರ್ಗ್​ನ ಎನ್​​ವಿರಾನ್​ಮೆಂಟಲ್ ಸೈನ್ಸ್​ ಪ್ರೊಫೆಸರ್​ ಬೆಥನಿ ಕಾರ್ನೆ ಅಲ್ಮೊರ್ಥ್​ ತಿಳಿಸಿದ್ದಾರೆ.

ಫುಡ್ ಪ್ಯಾಕೇಜಿಂಗ್​ನಲ್ಲಿ ಬಳಸಲಾಗುವ ಕಾಗದದ ಮೇಲೆ ರಾಸಾಯನಿಕದ ಲೇಪ ಇರುತ್ತದೆ. ಕಾಫಿ ಕಪ್​ನಲ್ಲಿರುವ ಇಂಥ ಲೇಪ ಕಾಫಿಯಿಂದ ಪೇಪರ್ ಒದ್ದೆ ಆಗದಂತೆ ನೋಡಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಇಂಥ ರಾಸಾಯನಿಕಗಳ ಲೇಪವನ್ನು ಪಾಲಿಲ್ಯಾಕ್ಟೈಡ್​ನಿಂದ ಮಾಡಲಾಗಿರುತ್ತದೆ.

ಇಂಥ ಬಯೋಪ್ಲಾಸ್ಟಿಕ್​ಗಳನ್ನು ಜೋಳ, ಕಬ್ಬು ಮುಂತಾದ ಮರುಸಂಸ್ಕರಿಸಬಹುದಾದ ವಸ್ತುಗಳಿಂದ ಮಾಡಲಾಗಿರುತ್ತದೆ. ಇದು ಬಯೋಡಿಗ್ರೇಡೇಬಲ್ ಎಂದು ಹೇಳಲಾಗಿದ್ದರೂ ಅಂದರೆ ಇವು ನಿಗದಿತ ಪರಿಸರದಲ್ಲಿ ಆಯಿಲ್ ಬೇಸ್ಡ್ ಪ್ಲ್ಯಾಸ್ಟಿಕ್​ಗಳಿಂತ ವೇಗವಾಗಿ ವಿಘಟನೆ ಹೊಂದುವಂಥದ್ದಾಗಿದ್ದರೂ ಇವು ಕೂಡ ಹಾನಿಕಾರಕವಾಗಿರುತ್ತವೆ ಎಂದು ಎನ್​ವಿರಾನ್​ಮೆಂಟಲ್ ಪೊಲ್ಯುಷನ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಈ ಬಯೋಪ್ಲಾಸ್ಟಿಕ್​ಗಳು ಪರಿಸರ ಮತ್ತು ನೀರಿನಲ್ಲಿ ಪರಿಣಾಮಕಾರಿಯಾಗಿ ಬೆರೆತು ಹೋಗುವುದಿಲ್ಲ ಎನ್ನಲಾಗಿದೆ.