ನವದೆಹಲಿ: ಲಡಾಖ್ನ ಪೂರ್ವಭಾಗದಲ್ಲಿ ವಾಸ್ತವ ಗಡಿರೇಖೆಯಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ವಿಷಯವಾಗಿ ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಲೇ ಇದೆ. ಈ ಪ್ರದೇಶದಲ್ಲಿನ ಹಾಟ್ಸ್ಪ್ರಿಂಗ್ನಿಂದ ಚೀನಾ ಹಿಂದೆ ಸರಿದಿದೆ. ಆದರೆ ಪ್ಯಾಂಗಾಂಗ್ ತ್ಸೊ ಮತ್ತು ಗೋಗ್ರಾ ಪೋಸ್ಟ್ನಿಂದ ಹಿಂದೆ ಸರಿಯಲು ನಿರಾಕರಿಸುತ್ತಿದೆ.
ವ್ಯೂಹಾತ್ಮಕವಾಗಿ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶ ಮತ್ತು ಗೋಗ್ರಾ ಪೋಸ್ಟ್ ತುಂಬಾ ಮುಖ್ಯವಾಗಿದೆ. ಅದೆಷ್ಟೇ ಹೇಳಿದರೂ ಚೀನಾ ಮಾತ್ರ ಈ ಎರಡು ಪ್ರದೇಶಗಳಿಂದ ಹಿಂದೆ ಸರಿಯಲು ನಿರಾಕರಿಸುತ್ತಲೇ ಇದೆ. ಈ ಎರಡು ಪ್ರದೇಶಗಳ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಲು ಚೀನಾ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ನಡುವೆ ಮೇನಿಂದ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಾಪಟಿಯನ್ನು ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿವೆ.
ಜೂ.15ರಂದು ಚೀನಾ ಯೋಧರು ಮುಳ್ಳುತಂತಿ ಸುತ್ತಿದ ಬಡಿಗೆ ಮತ್ತು ಕಬ್ಬಿಣದ ರಾಡ್ಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದಾದ ನಂತರದಲ್ಲಿ ಈ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.