ಈ ಬಾರಿ ಬಾಳಾಪುರ್​ನ 21 ಕೆ.ಜಿ. ಲಡ್ಡು ಹರಾಜು ಆಗಲ್ಲ

ganesh laddu
Published on

ಹೈದರಾಬಾದ್​: ಇಲ್ಲಿನ ಬಾಳಾಪುರ್​ ಗಣೇಶ ಉತ್ಸವ ಸಮಿತಿ ಈ ಬಾರಿನ ಗಣೇಶ ಹಬ್ಬಕ್ಕಾಗಿ ತಯಾರಿಸುವ 21 ಕೆ.ಜಿ. ಲಡ್ಡೂವನ್ನು ಹರಾಜು ಮಾಡದಿರಲು ನಿರ್ಧರಿಸಿದೆ. ರಾಷ್ಟ್ರಾದ್ಯಂತ ಕೋವಿಡ್​-19 ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ಸಮಿತಿಯು ಈ ನಿರ್ಧಾರ ಕೈಗೊಂಡಿದೆ.

ಕಳೆದ 25 ವರ್ಷಗಳಿಂದ ಆರು ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಮಿತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. 21 ಕೆ.ಜಿ. ಲಡ್ಡೂ ಪ್ರಮುಖ ಆಕರ್ಷಣೆಯಾಗಿರುತ್ತದೆ. ಹನಿ ಫುಡ್ಸ್​ನ ಮಹೇಶ್ವರ ರಾವ್​ ಅವರು ಈ ಲಡ್ಡೂವನ್ನು ತಯಾರಿಸಲು ಸಹಕರಿಸುತ್ತಾರೆ. 11ನೇ ದಿನ ಲಡ್ಡೂವನ್ನು ಹರಾಜ ಮಾಡಿದ ಬಳಿಕ ಮೂರ್ತಿಯನ್ನು ಹುಸೇನ್​ ಸಾಗರದವರೆಗೆ ಅಂದಾಜು 20 ಕಿ.ಮೀ. ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಕಳೆದ ವರ್ಷದ ಲಡ್ಡೂ 17.60 ಲಕ್ಷ ರೂ.ಗೆ ಹರಾಜಾಗಿತ್ತು.

ಸಾರ್ವಜನಿಕರಿಗೆ ಪ್ರವೇಶವಿಲ್ಲ: ಈ ಬಾರಿ ಕೂಡ ಸಮಿತಿಯು 6 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಿದೆ. 21 ಕೆ.ಜಿ. ಲಡ್ಡೂ ಕೂಡ ತಯಾರಾಗಲಿದೆ. ಆದರೆ, ಪೂಜಾ ಕೈಂಕರ್ಯಕ್ಕೆ ಸಮಿತಿಯ ಸದಸ್ಯರನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲು ಸಮಿತಿ ನಿರ್ಧರಿಸಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಬಾಳಪುರ್​ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷ ಕಲ್ಲೆಂ ನಿರಂಜನ್ ರೆಡ್ಡಿ, ಕೋವಿಡ್​-19 ಹಿನ್ನೆಲೆಯಲ್ಲಿ ಮೂರ್ತಿಯ ಪ್ರತಿಷ್ಠಾಪನೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗುತ್ತಿದೆ. ಅಲ್ಲದೆ, ಲಡ್ಡೂವಿನ ಹರಾಜನ್ನು ಮಾಡದಿರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಲಡ್ಡೂವನ್ನು ಹರಾಜಿನಲ್ಲಿ ಕೊಳ್ಳುವವರಿಗೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಭಾರತದ ನಾನಾ ಭಾಗಗಳ ಜನರು ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ. 2018ನೇ ಸಾಲಿನಲ್ಲಿ ಲಡ್ಡೂ 16.6 ಲಕ್ಷ ರೂ.ಗೆ ಹರಾಜಾಗಿತ್ತು. ಲಡ್ಡೂವಿನ ಹರಾಜಿಂದ ಬರುವ ಹಣವನ್ನು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಈ ಬಾರಿ ಹೆಚ್ಚಿನ ಮೊತ್ತದ ನಿರೀಕ್ಷೆ ಇತ್ತು. ಆದರೆ ಕರೊನಾ ವೈರಾಣು ಸೋಂಕು ಅದಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net