ನ್ಯೂಸ್

ಅಮ್ಮಾ.... ಒಮ್ಮೆ ನಿನ್ನ ಕಣ್ತುಂಬಿಕೊಂಡು ಬಿಡುವೆ: ಐಸಿಯು ಕಿಟಕಿ ಬಳಿ ಕುಳಿತ ಪ್ಯಾಲೆಸ್ತೈನ್ ಯುವಕನ ಕಣ್ಣೀರ ಕಥೆ

ರಮಲ್ಲಾಹ್​: ಕೋವಿಡ್ -19 ವೈರಸ್ ಮನುಷ್ಯ ಬದುಕಿಗೆ ಎಂಥೆಂಥಾ ಪಾಠವನ್ನೆಲ್ಲ ಕಲಿಸಿತು, ಕಲಿಸುತ್ತಿದೆ ಎಂಬುದನ್ನು ಅವಲೋಕಿಸಿದರೆ ಕಣ್ಣಾಲಿಗಳು ತೇವಗೊಳ್ಳುವುದಂತೂ ಖಚಿತ. ಅಂಥದ್ದೊಂದು ಸನ್ನಿವೇಶ ಟ್ವಿಟರ್ ಮೂಲಕ ಬಹಿರಂಗವಾಗಿದೆ.

ಪ್ಯಾಲೆಸ್ತೈನ್​ ನ ವ್ಯಕ್ತಿಯೊಬ್ಬ ಹಾಸ್ಪಿಟಲ್​ನ ಗೋಡೆ ಮೇಲೇರಿ ಕಿಟಕಿ ಬಳಿ ಕುಳಿತು ಕೋವಿಡ್​-19ಗೆ ಬಲಿಯಾದ ತನ್ನ ತಾಯಿಯನ್ನು ನಿತ್ಯವೂ ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯವದು. ಮೊಹಮ್ಮದ್ ಸಫಾ ಎಂಬುವವರು ಈ ಫೋಟೋ ಮತ್ತು ಕ್ಯಾರಿಕೇಚರ್​ ಅನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.

ಟ್ವೀಟ್​ನಲ್ಲಿ ಅವರು ಹೇಳಿದ್ದಿಷ್ಟು - ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ತನ್ನ ತಾಯಿಯನ್ನು ನೋಡುವುದಕ್ಕಾಗಿ ಪ್ಯಾಲೆಸ್ತೈನ್​ನ ಈ ವ್ಯಕ್ತಿ ಪ್ರತಿ ನಿತ್ಯ ರಾತ್ರಿ ಈ ರೀತಿ ಆಸ್ಪತ್ರೆಯ ಗೋಡೆ ಏರುತ್ತ ಸಾಗಿ ಕಿಟಿಕಿಯಲ್ಲಿ ಕೆಲ ಹೊತ್ತು ಕುಳಿತುಬಿಡುತ್ತಿದ್ದ. ಈ ರೀತಿ ತಾಯಿ ಕೊನೆಯುಸಿರೆಳೆಯುವ ತನಕವೂ ಮಾಡಿದ್ದ.

ಮಾಧ್ಯಮ ವರದಿಗಳ ಪ್ರಕಾರ, ಆ ರೀತಿ ಕುಳಿತ ವ್ಯಕ್ತಿಯ ಹೆಸರು ಜಿಹಾದ್ ಅಲ್​-ಸುವೈಟಿ. ಮೂವತ್ತು ವರ್ಷ ವಯಸ್ಸಿನ ಆತ ವೆಸ್ಟ್​ಬ್ಯಾಂಕ್​ನ ಬೈಟ್​ ಅವಾ ಪಟ್ಟಣದ ನಿವಾಸಿ. ಹೆಬ್ರೋನ್ ಸ್ಟೇಟ್ ಹಾಸ್ಪಿಟಲ್​ನ ಐಸಿಯು ಕಿಟಕಿ ಅದು. ಐಸಿಯುನಲ್ಲಿದ್ದ ಸುವೈಟಿ ತಾಯಿಯ ಹೆಸರು ರಸ್ಮಿ ಸುವೈಟಿ. ಅವರಿಗೆ 73 ವರ್ಷ ವಯಸ್ಸಾಗಿತ್ತು.ಗುರುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಅಷ್ಟರಲ್ಲಾಗಲೇ ಅವರ ಮಗ ಕಿಟಕಿಯಲ್ಲಿ ಕುಳಿತು ನೋಡಿ ಹಿಂದಿರುಗಿದ್ದ!ಜಿಹಾದ್ ಅಲ್ ಸುವೈಟಿಗೂ ಕರೊನಾ ಸೋಂಕು ತಗುಲಿದೆ. ಇನ್ನು ಈ ಟ್ವೀಟ್ ಮಾಡಿದ ಮೊಹಮ್ಮದ ಸಫಾ ಮಾನವ ಹಕ್ಕು ಕಾರ್ಯಕರ್ತರಾಗಿದ್ದು, ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಯೂ ಆಗಿದ್ದಾರೆ. (ಏಜೆನ್ಸೀಸ್)