ಇಸ್ಲಾಮಾಬಾದ್: ತನ್ನ ಖಾಸಗಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪಾಕಿಸ್ತಾನದ ಟಿಕ್‌ಟಾಕ್ ಸ್ಟಾರ್ ಇಮ್ಶಾ ರೆಹಮಾನ್ ( Imsha Rehman ) ತನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಲಾಕ್ ಮಾಡಿದ್ದಾರೆ.
22 ವರ್ಷದ ಇಮ್ಶಾ ರೆಹಮಾನ್, ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಟಿಕ್‌ಟಾಕ್ ಹೊರತುಪಡಿಸಿ, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ತಾನು ಹುಟ್ಟಿ ಬೆಳೆದದ್ದು ಲಾಹೋರ್‌ನಲ್ಲಿ ಎಂದು ಈ ಹಿಂದೆ ಇಮ್ಶಾ ಹೇಳಿದ್ದರು.
ಸ್ಥಳೀಯ ವರದಿಗಳ ಪ್ರಕಾರ, ಇಮ್ಶಾ ಅವರ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ತೀವ್ರ ಟ್ರೋಲಿಂಗ್ಗೆ ಕಾರಣವಾಗಿದೆ. ಎಕ್ಸ್ನಲ್ಲಿನ ಕೆಲವು ಬಳಕೆದಾರರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಇಮ್ಶಾರನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇದರಿಂದ ಮನನೊಂದಿರುವ ಇಮ್ಶಾ, ಟಿಕ್‌ಟಾಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಇದಕ್ಕೂ ಮೊದಲು ಇಮ್ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಅರೆ ಬೆತ್ತಲೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂಬ ಆರೋಪವೂ ಇದೆ.
ಸಾಮಾಜಿಕ ಜಾಲತಾಣದಿಂದ ಹೊರಬರುವ ಮೊದಲು, ಇಮ್ಶಾ ಈ ವಿವಾದವನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದು, ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದಂತೆ ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ಗಳು ಎದುರಿಸುತ್ತಿರುವ ಕಟು ವಾಸ್ತವವನ್ನು ತೆರೆದಿಟ್ಟಿದ್ದಾರೆ. ಇಮ್ಶಾ ರೆಹಮಾನ್ ಅವರು ಡೇಟಾ ಉಲ್ಲಂಘನೆಗೆ ಬಲಿಯಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಡೇಟಾ ಉಲ್ಲಂಘನೆ ಅಥವಾ ಡೇಟಾ ಸೋರಿಕೆಯು ಇನ್ನೊಬ್ಬ ವ್ಯಕ್ತಿಯ ಡೇಟಾದ ಅನಧಿಕೃತ ಪ್ರವೇಶವಾಗಿದೆ. ಇದು ಸಂಭವಿಸಿದಾಗ, ಸಂಬಂಧಪಟ್ಟ ವ್ಯಕ್ತಿಯ ವೈಯಕ್ತಿಕ ಮಾಹಿತಿಯು ಸಾರ್ವಜನಿಕವಾಗುವ ಸಾಧ್ಯತೆ ಹೆಚ್ಚು. ಈ ರೀತಿಯಲ್ಲಿ ಗೌಪ್ಯ ಡೇಟಾವನ್ನು ಕದಿಯಲಾಗುತ್ತಿದೆ ಎಂದು ವರದಿ ಮಾಡಿವೆ.
ಇಮ್ಶಾ ವಿಡಿಯೋ ಸೋರಿಕೆ ಪ್ರಕರಣ ಆನ್ಲೈನ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದು ಪ್ರಚಾರದ ತಂತ್ರವಾಗಿರಬಹುದು ಎಂದು ಸೂಚಿಸಿದರೆ, ಇತರರು ಆಕೆಯ ಗೌಪ್ಯತೆಯ ಹಕ್ಕನ್ನು ಪ್ರತಿಪಾದಿಸುವ ಮೂಲಕ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಮತ್ತೊಬ್ಬ ಪಾಕಿಸ್ತಾನಿ ಟಿಕ್‌ಟಾಕ್ ತಾರೆ ಮಿನಾಹಿಲ್ ಮಲಿಕ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಮ್ಶಾ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್)