ಇಸ್ಲಮಾಬಾದ್: ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಸುದ್ದಿಗೋಷ್ಠಿಯೊಂದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಗಳು ಇಳಿದಿರುವ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಗಾರ್ಲಿಕ್ ಎಂಬ ಬೆಳ್ಳುಳ್ಳಿಯ ಇಂಗ್ಲಿಷ್ ಹೆಸರಿಗೆ ಹಿಂದಿ ಶಬ್ದ ಹೇಳುವಾಗ ಎಡವಿದ್ದಾರೆ. 'ಗಾರ್ಲಿಕ್ ಅಂದ್ರೆ ಶುಂಠಿ' ಎನ್ನುತ್ತಾ ಮಾತು ಮುಂದುವರಿಸಿರುವ ಅವರ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರಲ್ಲಿ ನಗೆಯುಕ್ಕಿಸಿದೆ.
ಕೆಲವು ದಿನಗಳ ಹಿಂದೆ ಟಿವಿಯಲ್ಲಿ ಪ್ರಸಾರವಾದ ಅವರ ಮಾತುಗಳ ದೃಶ್ಯವನ್ನು ಪಾಕಿಸ್ತಾನಿ ಪತ್ರಕರ್ತೆ ನೈಲಾ ಇನಾಯತ್, ಮಂಗಳವಾರ ರಾತ್ರಿ, ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಅದು ಈವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇನಾಯತ್ ತಮ್ಮ ಪೋಸ್ಟ್ಗೆ "ಗಾರ್ಲಿಕ್ ಈಸ್ ಅದ್ರಕ್ ಎಂದು ಇನ್ಫರ್ಮೇಶನ್ ಮಿನಿಸ್ಟರ್ ಫವಾದ್ ಚೌಧರಿ ಹೇಳಿದ್ದಾರೆ. ನಾವು ಪ್ರತಿದಿನ ಏನಾದರೂ ಹೊಸದನ್ನು ಕಲಿಯುತ್ತೇವೆ" ಎಂದು ಹಾಸ್ಯ ಮಾಡಿದ್ದಾರೆ.
ಈ ವಿಡಿಯೋ ತುಣುಕಲ್ಲಿ ಫವಾದ್ ಚೌಧರಿ, ಹಿಂದಿಯಲ್ಲಿ ಈರುಳ್ಳಿಗೆ ಪ್ಯಾಸ್ ಎಂದು ಸರಿಯಾಗೇ ಹೇಳುತ್ತಾರೆ. ಆದರೆ ಗಾರ್ಲಿಕ್ ಅರ್ಥಾತ್ ಬೆಳ್ಳುಳ್ಳಿಗೆ ಸರಿಯಾದ ಹಿಂದಿ ಶಬ್ದಕ್ಕೆ ತಡಕಾಡುತ್ತಾರೆ. ಅಲ್ಲಿದ್ದ ಜನರು ಲೆಹಸುನ್ ಎಂದು ಹೇಳಿಕೊಟ್ಟರೂ, ಗಾರ್ಲಿಕ್ ಈಸ್ ಅದ್ರಕ್..ಅದ್ರಕ್ ಎಂದು ಶುಂಠಿಯ ಹಿಂದಿ ಹೆಸರನ್ನು ಬಳಸುತ್ತಾರೆ. ವಿಡಿಯೋ ನೋಡಿ ನೆಟ್ಟಿಗರು ನಗಾಡುತ್ತಿದ್ದು, ಸಾವಿರಾರು ಲೈಕುಗಳು-ರೀಟ್ವೀಟ್ಗಳು ಕಂಡುಬಂದಿವೆ. (ಏಜೆನ್ಸೀಸ್)