ನ್ಯೂಸ್

ತಾಂತ್ರಿಕ ತೊಂದರೆಯಿಂದಾಗಿ ಹಾರಾಟ ನಿಲ್ಲಿಸಿದ 400ಕ್ಕೂ ಹೆಚ್ಚು ವಿಮಾನಗಳು!

ವಾಷಿಂಗ್ಟನ್: ಅಮೆರಿಕಾದ ವಿಮಾನಯಾದ ನಿಯಂತ್ರಣ ಸಂಸ್ಥೆಯ ಕಂಪ್ಯೂಟರ್ ಸಿಸ್ಟಮ್​ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಪರಿಣಾಮ ಸುಮಾರು 400ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳು ತಮ್ಮ ಹಾರಾಟವನ್ನು ಮೊಟಕುಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ವಿಮಾನದ ಫೈಲಟ್​ಗಳಿಗೆ ಅಪಾಯ ಹಾಗೂ ಎಚ್ಚರಿಕೆಯ ಸೂಚನೆಗಳನ್ನು ರವಾನಿಸುವಂತಹ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಪೈಲಟ್​ಗಳಿಗೆ ಮಾಹಿತಿ ನೀಡಲು ಸಾಧ್ಯವಾಗದಂತಾಗಿದೆ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ನಿಯಂತ್ರಕರ ವೆಬ್‌ಸೈಟ್ ಹೇಳಿರುವುದು ವರದಿಯಾಗಿದೆ. ಸದ್ಯ ತಾಂತ್ರಿಕ ತೊಂದರೆಯಿಂದ ವಿಮಾನ ಹಾರಾಟ ಮೊಟಕುಗೊಂಡಿರುವುದುರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ.

ವರದಿಯ ಪ್ರಕಾರ ಅಮೆರಿಕಾದ ಕಾಲಮಾನ ಬೆಳಗ್ಗೆ 5.30ರ ಹೊತ್ತಿಗೆ ಕಂಪ್ಯೂಟರ್ ಸಿಸ್ಟಮ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ 400 ವಿಮಾನಗಳು ಹಾರಾಟ ನಿಲ್ಲಿಸಿದ್ದವು. ಇದಾದ ಬಳಿಕವೂ ತಾಂತ್ರಿಕ ಸಮಸ್ಯೆ ಬಗೆಹರಿಯದ ಕಾರಣ ಒಟ್ಟಾರೆ 1000ಕ್ಕೂ ಅಧಿಕ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)