ನ್ಯೂಸ್

ನಿಯಮ ಉಲ್ಲಂಘನೆ: 3,000ಕ್ಕೂ ಹೆಚ್ಚು ಧ್ವನಿವರ್ಧಕ ತೆಗೆದುಹಾಕಿದ ಯೋಗಿ ಸರ್ಕಾರ!

ಉತ್ತರಪ್ರದೇಶ: ಉತ್ತರಪ್ರದೇಶದ ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ 3,000ಕ್ಕೂ ಅಧಿಕ ಧ್ವನಿವರ್ಧಕಗಳು ನಿಗದಿತ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದ ಬೆನ್ನಲ್ಲೇ ಅವುಗಳನ್ನು ಇದೀಗ ತೆಗೆದುಹಾಕಲಾಗಿದೆ ಎಂದು ಉತ್ತರಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧ್ವನಿವರ್ಧಕಗಳ ವಿರುದ್ಧದ ಒಂದು ತಿಂಗಳ ಅಭಿಯಾನದ ಭಾಗವಾಗಿ, ಸೋಮವಾರ (ನ.27) ಎಲ್ಲಾ ಜಿಲ್ಲೆಗಳಲ್ಲಿ ಬೆಳಗ್ಗೆ 5 ರಿಂದ 7 ರವರೆಗೆ 61,399 ಧ್ವನಿವರ್ಧಕಗಳನ್ನು ಪರಿಶೀಲಿಸಲಾಗಿದೆ. ನವೆಂಬರ್ 23ರಿಂದ ಡಿಸೆಂಬರ್ 23ರ ನಡುವೆ ರಾಜ್ಯ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾತನಾಡಿ, ನಿಯಮಗಳಿಗೆ ವಿರುದ್ಧವಾಗಿ ಅಥವಾ ನಿಗದಿತ ಡೆಸಿಬಲ್ ಮಿತಿಯನ್ನು ಮೀರಿ ಕಾರ್ಯನಿರ್ವಹಿಸುವ 3,238 ಧ್ವನಿವರ್ಧಕಗಳು ಅಥವಾ ಧ್ವನಿ ವರ್ಧಕಗಳನ್ನು ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ. 7,288 ಧ್ವನಿವರ್ಧಕಗಳು ಅಥವಾ ಆಂಪ್ಲಿಫೈಯರ್‌ಗಳ ಡೆಸಿಬಲ್ ಮಿತಿಯನ್ನು ಮಾನದಂಡಗಳಿಗೆ ಸಮನಾಗಿ ತರಲು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

ನಿಗದಿಪಡಿಸಲಾಗಿರುವ ಶಬ್ದದ ಮಿತಿಯನ್ನು ಉಲ್ಲಂಘಿಸುವ ಜನರಿಗೆ ಸದ್ಯ ನೋಟಿಸ್ ನೀಡಲಾಗಿದ್ದು, ಭವಿಷ್ಯದಲ್ಲಿ ಯಾವುದೇ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ,(ಏಜೆನ್ಸೀಸ್).