ನವದೆಹಲಿ: ಪ್ರಪಂಚದಲ್ಲಿ ವಿಷಪೂರಿತ ಮತ್ತು ವಿಷರಹಿತ ಹಾವುಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಹಲವು ಇಂದು ಅಳಿವಿನಂಚಿನಲ್ಲಿವೆ. ಭಾರತದಲ್ಲಿ ಕಂಡುಬರುವ ಕೆಲವು ಹಾವುಗಳನ್ನು ಸಹ ಆ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವುಗಳಲ್ಲಿ ಒಂದು ಕೋರಲ್ ರೆಡ್ ಕುಕ್ರಿ ಹಾವು. ಇದನ್ನು ಒಲಿಗೊಡಾನ್ ಖೇರಿಯೆನ್ಸಿಸ್ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಈ ಹಾವು ಪತ್ತೆಯಾಯಿತು.
ಕುಕ್ರಿ ಹಾವು ಮೊದಲ ಬಾರಿಗೆ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ 1936ರಲ್ಲಿ ಪತ್ತೆಯಾಯಿತು. ಈ ಕುಕ್ರಿ ಹಾವು ಗಾಢ ಕಿತ್ತಳೆ ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಉತ್ತರ ಪ್ರದೇಶದ ನಂತರ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ತಲಾ ಒಂದೊಂದು ಹಾವುಗಳನ್ನು ಈವರೆಗೆ ನೋಡಲಾಗಿದೆ. ಉತ್ತರ ಪ್ರದೇಶದಲ್ಲಿ ಮೊದಲು ಪತ್ತೆಯಾದ 80 ವರ್ಷಗಳ ನಂತರ ಭಾರತದಲ್ಲಿ ಮತ್ತೊಮ್ಮೆ ಈ ಹಾವು ಕಂಡುಬಂದಿತು. 2014 ಮತ್ತು 2015ರಲ್ಲಿ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಕುಕ್ರಿ ಹಾವಿನ ಕಳೇಬರ ಸಿಕ್ಕಿತ್ತು.
ಇದಾದ ನಂತರ ಕುಕ್ರಿ ಹಾವು 2018 ಮತ್ತು 2019 ರಲ್ಲಿ ಉತ್ತರ ಪ್ರದೇಶದಲ್ಲಿ ಮತ್ತು 2020ರಲ್ಲಿ ಉತ್ತರಾಖಂಡದಲ್ಲಿ ಕಂಡುಬಂದಿದೆ. ವರದಿಗಳ ಪ್ರಕಾರ ಈ ಅಪರೂಪದ ಹಾವು ಇದುವರೆಗೂ ಐದಾರು ಬಾರಿ ಮಾತ್ರ ಪತ್ತೆಯಾಗಿದೆ. ಇನ್ನು ಸಂಶೋಧಕರು ಈ ಹಾವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ, ಈ ಹಾವುಗಳು ಸಿಗುವುದು ತುಂಬಾನೇ ಅಪರೂಪ.
ಕುಕ್ರಿ ಹಾವುಗಳು ರಾತ್ರಿಯಲ್ಲಿ ವಾಸಿಸುತ್ತವೆ ಮತ್ತು ಹೆಚ್ಚಿನ ಸಮಯ ಭೂಗತದಲ್ಲಿ ವಾಸಿಸುತ್ತವೆ. ಇದು ಎರೆಹುಳುಗಳು ಮತ್ತು ಲಾರ್ವಾಗಳನ್ನು ತಿನ್ನುತ್ತದೆ. ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಶೆಡ್ಯೂಲ್ IV ರ ಅಡಿಯಲ್ಲಿ ಕುಕ್ರಿ ಹಾವನ್ನು ಒಲಿಗೋಡಾನ್ ಖೇರಿಯೆನ್ಸಿಸ್ ಜಾತಿ ಅಡಿಯಲ್ಲಿ ರಕ್ಷಿಸಲಾಗಿದೆ.
ಅರಣ್ಯಗಳ ಅನಿಯಂತ್ರಿತ ಅತಿಕ್ರಮಣ, ನಗರೀಕರಣ, ಕೃಷಿಗಾಗಿ ಭೂಮಿಯನ್ನು ಉಳುಮೆ ಮಾಡುವುದು, ಚಹಾ ತೋಟಗಳು ಮತ್ತು ಬಿದಿರಿನ ಕಾಡುಗಳನ್ನು ತೆರವುಗೊಳಿಸುವುದರಿಂದ ಈ ಅಪರೂಪದ ಹಾವಿನ ಆವಾಸಸ್ಥಾನವು ನಾಶವಾಗುತ್ತಿದೆ. ಅಲ್ಲದೆ, ಜನರು ತಮ್ಮ ಅಜ್ಞಾನದಿಂದಾಗಿ ಕುಕ್ರಿ ಹಾವನ್ನು ಕೊಲ್ಲುತ್ತಾರೆ. ಇದರ ಪ್ರಕಾಶಮಾನವಾದ ಬಣ್ಣದಿಂದ ಭಯಪಡುತ್ತಾರೆ. ಆದರೆ, ವಾಸ್ತವವಾಗಿ ಈ ಹಾವು ವಿಷಕಾರಿಯಲ್ಲ ಮತ್ತು ಕುಕ್ರಿ ಹಾವು ಶಾಂತ ಸ್ವಭಾವದ ಹಾವು. ಇಂದು ಈ ಹಾವು ಅಳಿವಿನಂಚಿನಲ್ಲಿದೆ. ಯಾರಿಗೂ ತೊಂದರೆ ಮಾಡದ ಶಾಂತ ಸ್ವಭಾವದ ಹಾವಿಗೆ ಈ ಸ್ಥಿತಿ ಬಂದಿರುವುದನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. (ಏಜೆನ್ಸೀಸ್)