ನ್ಯೂಸ್

ಉತ್ತರ ಕನ್ನಡದಲ್ಲಿ ಬಿರುಸಿನ ಮಳೆ! ಕರಾವಳಿ, ಮಲೆನಾಡಲ್ಲಿ ನಿಲ್ಲದ ವರ್ಷಧಾರೆ; ಈ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಉತ್ತರ ಕನ್ನಡ: ಕಳೆದ ಒಂದು ವಾರದಿಂದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕಾರವಾರ, ಉಡುಪಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೆಲವೆಡೆ ಜಿಟಿಜಿಟಿ ಮಳೆಯಾದರೆ, ಹಲವೆಡೆ ಧಾರಕಾರ ಮಳೆ ಸುರಿಯುತ್ತಿದೆ. ಇದರಿಂದ ನಗರದ ಮುಖ್ಯರಸ್ತೆಗಳು ಸೇರಿ ಹೆದ್ದಾರಿಗಳು ಬಂದ್​ ಆಗಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಉತ್ತರ ಕನ್ನಡ, ಕರಾವಳಿ ಭಾಗದಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರ ಕರ್ನಲ್ ಹಿಲ್ ಬಳಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಭಟ್ಕಳ, ಹೊನ್ನಾವರ, ಕಾರವಾರ, ಅಂಕೋಲಾ ತಾಲೂಕಿನ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು. ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸುತ್ತಿದ್ದು, ಕಡಲ ಕೊರೆತ ಹೆಚ್ಚಿದೆ. ಸೋಮವಾರ ಕೂಡ ಮಳೆ ಮುಂದುವರಿಯುವ ಲಕ್ಷಣಗಳಿವೆ ಎಂದು ವರರದಿಯಾಗಿದೆ.

ಒಂದೆಡೆ ಮಲೆನಾಡು, ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ, ಅರೆಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯ ವೇಗದಿಂದ ಮಳೆ ಚುರುಕಾಗುವ ಸಾಧ್ಯತೆಯಿದೆ. ಇನ್ನು ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಆಗಾಗ್ಗೆ ಮಳೆ ಕಾಣಿಸಿಕೊಳ್ಳುತ್ತಿದೆ. ಸದ್ಯ ಶಿವಮೊಗ್ಗದಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಮುಂದುವರಿದಿದ್ದರೂ ಸರಾಸರಿ ಪ್ರಮಾಣ 27.37 ಮಿ.ಮೀ.ಗೆ ಇಳಿಕೆಯಾಗಿದೆ.

ಯಾವ ಐದು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​: 

ಮೂಡಿಗೆರೆ, ಕಲಬುರಗಿ, ಹಾಸನ, ಆಗುಂಬೆಯಲ್ಲಿ ಭಾನುವಾರ ವರ್ಷಧಾರೆಯಾಗಿದೆ. ಉಡುಪಿ, ದ.ಕನ್ನಡ, ಉ.ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮುಂದಿನ 2 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ ತೀರದುದ್ದಕ್ಕೂ ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳವರೆಗೆ ಎತ್ತರದ ಅಲೆಗಳು ಏಳಲಿವೆ. ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್ ವಾಚ್ ಅಲರ್ಟ್ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಜು.8ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಇರಲಿದೆ.