

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಅನಾರೋಗ್ಯ ಪೀಡಿತರಿಗೆ ತ್ವರಿತ ಚಿಕಿತ್ಸೆ ಲಭ್ಯವಾಗಲು ಸರ್ಕಾರ ನೀಡಿದ 108 ಆ್ಯಂಬುಲೆನ್ಸ್ನಲ್ಲಿ ಸಮಸ್ಯೆಗಳಿದ್ದು, ಶೀಘ್ರ ಆಧುನಿಕರಣಗೊಳಿಸಲಾಗುತ್ತದೆ. ಜತೆಗೆ ತುರ್ತು ಸಂಚಾರದ ಸಂದರ್ಭ ವಿಡಿಯೋ ಕರೆ ಮೂಲಕ ಚಿಕಿತ್ಸೆಗೆ ಮಾರ್ಗದರ್ಶನ ದೊರೆಯುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇವುಗಳಿಗಾಗಿ ಶೀಘ್ರ ಟೆಂಡರ್ ಕರೆಯಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗದ ವಿಚಾರ ಗಮನಕ್ಕೆ ಬಂದಿದ್ದು, ಈ ಕಾರಣಕ್ಕಾಗಿ ಮುಂದಿನ ವಾರ ಸಭೆ ಕರೆಯಲಾಗಿದೆ ಎಂದರು.
ಈ ಹಿಂದಿನ ಸರ್ಕಾರ ಅವಧಿಯಲ್ಲಿ ಆರೋಗ್ಯ ಕೇಂದ್ರಗಳಿಗೆ ಶೇ.30 ಔಷಧಿ ಪೂರೈಸುತ್ತಿತ್ತು. ನಮ್ಮ ಸರ್ಕಾರ ಆರೋಗ್ಯ ಕೇಂದ್ರಗಳಿಗೆ ಶೇ.80 ಔಷಧಿ ಪೂರೈಸುತ್ತಿದೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಔಷಧಿ ವಿತರಣೆಯಾಗಲಿದೆ. ಸರ್ಕಾರಿ ಆರೋಗ್ಯ ಕೇಂದ್ರದ ವಠಾರದೊಳಗಿರುವ ಎಲ್ಲ ಮೆಡಿಕಲ್ ಶಾಪ್ಗಳನ್ನು ತೆರವುಗೊಳಿಸಲಿದ್ದು, ಆಸ್ಪತ್ರೆಯ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಮೆಡಿಕಲ್ ಶಾಪ್ಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಸಿಬ್ಬಂದಿ ಕೊರತೆ ನೀಗಿಸಲು 750 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಉಳಿದ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಉಪ್ಪಿನಂಗಡಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದ ಮೇಲೆ ಆಪರೇಷನ್ ಥಿಯೇಟರ್ ನಿರ್ಮಿಸಲಾಗುತ್ತದೆ. ಜತೆಗೆ ಗುತ್ತಿಗೆ ಆಧಾರದಲ್ಲಿ ಅರಿವಳಿಕೆ ತಜ್ಞರನ್ನೂ ನೇಮಕ ಮಾಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಮುಖಂಡರಾದ ಪದ್ಮರಾಜ್, ಡಾ. ರಾಜಾರಾಮ ಕೆ.ಬಿ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಸಹಾಯಕ ಕಮಿಷನರ್ ಮೊದಲಾದವರು ಉಪಸ್ಥಿತರಿದ್ದರು.
ಕಡಬ ಮತ್ತು ಪುತ್ತೂರಿಗೆ 65 ಲಕ್ಷ ರೂ. ವೆಚ್ಚದಲ್ಲಿ 7 ಆರೋಗ್ಯ ಕ್ಷೇಮ ಕೇಂದ್ರ ಮಂಜೂರುಗೊಳಿಸಲಾಗಿದೆ. ಒಂದು ಆರೋಗ್ಯ ಕ್ಷೇಮ ಕೇಂದ್ರಕ್ಕೆ ಒಬ್ಬರು ವೈದ್ಯರು, ಓರ್ವ ಲ್ಯಾಬ್ ಟೆಕ್ನಿಷಿಯನ್, ಒಬ್ಬರು ನರ್ಸ್ ನೇಮಕ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.