ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ಸದ್ಗುರು
‘ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗದಿದ್ದರೆ, ಅದಕ್ಕೆ ಶರಣಾಗಿ’ ಎಂದು ಕೆಲವರು ಹೇಳುತ್ತಾರೆ, ನೀವೇನೋ ಸಮಸ್ಯೆಯನ್ನು ಹೋಗಲು ಬಿಡಬಹುದು, ಆದರೆ ಆ ಸಮಸ್ಯೆ ನಿಮ್ಮನ್ನು ಹೋಗಲು ಬಿಡದೇ ಇರಬಹುದು. ಯಾವಾಗಲೂ ಹೀಗೇ ಆಗುವುದು- ಜನ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುತ್ತಾರೆ, ಆದರೆ ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ. ಅವರು ಸಾಲವನ್ನು ಬಿಟ್ಟುಬಿಡಲು ಬಯಸುತ್ತಾರೆ, ಆದರೆ ಬ್ಯಾಂಕ್ ಬಿಡುವುದಿಲ್ಲ. ಜೀವನವೂ ಹಾಗೆಯೇ- ಯಾವುದಾದರೂ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿರಿ ಎಂದರೆ, ಅದು ಸಾಲದ ತರಹ. ದುಡ್ಡಿನಿಂದಲ್ಲ, ಆದರೆ, ಜೀವನದಿಂದ. ಬುದ್ಧಿವಂತರಾದರೆ, ಅದನ್ನು ಒಂದು ರೀತಿಯಲ್ಲಿ ಹಿಂದಿರುಗಿಸುತ್ತೀರಿ, ಇಲ್ಲವಾದರೆ, ಇನ್ನೊಂದು ರೀತಿಯಲ್ಲಿ ಹಿಂದಿರುಗಿಸುತ್ತೀರಿ, ಆದರೆ, ಹಿಂದಿರುಗಿಸಲೇಬೇಕು. ಹಾಗಾಗಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ತೆಗೆದುಕೊಳ್ಳುವ ನಿರ್ಣಯಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಪರಿಸ್ಥಿತಿ ಏನೇ ಇರಲಿ, ಅದನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ಅದರಿಂದ ದೂರ ಓಡಬೇಡಿ. ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳಿ. ಆಗ ಆ ಪರಿಸ್ಥಿತಿ ಅರ್ಥವಾಗುತ್ತದೆ. ಅದು ಅರ್ಥವಾದಾಗ ಜೀವನದಲ್ಲಿ ಆ ಪರಿಸ್ಥಿತಿ ಎಷ್ಟು ಬೆಲೆ ಬಾಳುವಂಥದ್ದು ಎಂದು ತಿಳಿಯುತ್ತದೆ. ಪರಿಸ್ಥಿತಿಗಳ ನಿರಂತರತೆಯೇ ಜೀವನ. ಬೆಳವಣಿಗೆಯ ಪಥದಲ್ಲಿದ್ದರೆ, ನಿಭಾಯಿಸಲಾಗದಂಥ ನಾನಾ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಈ ಪರಿಸ್ಥಿತಿ ಗಳು ಸವಾಲಾಗಿರಬಹುದು, ಸಮಸ್ಯೆಯಂತೂ ಖಂಡಿತ ಅಲ್ಲ. ಜೀವನದಲ್ಲಿ ಯಾವುದೇ ಸವಾಲುಗಳು ಇಲ್ಲದೇ ಇರುವುದೇ ಒಂದು ಸಮಸ್ಯೆ ಮತ್ತು ಅದರರ್ಥ ಜೀವನ ಜಡವಾಗಿದೆ ಎಂದು. ಸದಾಕಾಲ ಬೆಳವಣಿಗೆಯ ಹಾದಿಯಲ್ಲಿ ಇರ ಬೇಕೆಂದು ಬಯಸಿದರೆ, ಯಾವಾಗಲೂ ನಿಮಗೆ ನಿಭಾಯಿಸಲಾಗದಂಥ ಹೊಸ ಪರಿಸ್ಥಿತಿಗಳಿಗೆ ಎದುರಾಗುತ್ತಿರಬೇಕಾಗುತ್ತದೆ. ಇಂತಹ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೀರೆಂದರೆ, ಮಹತ್ತರವಾದ ಸಂಭವನೀಯತೆಯ ಬದುಕನ್ನು ಬದುಕುತ್ತಿದ್ದೀರಿ ಎಂದರ್ಥ.