ನ್ಯೂಸ್

2022 ನವೋದ್ಯಮಗಳ ವರ್ಷ: ಆಕಾಶದಷ್ಟು ಅವಕಾಶ..

Webdesk - Ravikanth

ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.

| ಪ್ರಶಾಂತ್ ಪ್ರಕಾಶ್ ಅಧ್ಯಕ್ಷ, ಸ್ಟಾರ್ಟಪ್ ವಿಷನ್ ಗ್ರೂಪ್

ಇದು ನವೋದ್ಯಮಗಳ ಯುಗ. ಬೇರೆ ಬೇರೆ ವಲಯಗಳಲ್ಲಿ ಸಾಕಷ್ಟು ಅವಕಾಶಗಳಿವೆ. ರಾಜ್ಯ ಸರ್ಕಾರ ಬಿಯಾಂಡ್ ಬೆಂಗಳೂರು ಎಂಬ ಆಲೋಚನೆಯಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿಗಳಲ್ಲಿ ಕ್ಲಸ್ಟರ್​ಗಳನ್ನು ಸ್ಥಾಪನೆ ಮಾಡುತ್ತಿದೆ. ಅದರ ಉದ್ದೇಶವೇ ವೇದಿಕೆ ಕಲ್ಪಿಸುವುದಾಗಿದೆ. ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಕಲ್ಪಿಸುವ ಮೂಲಕ ಉದ್ಯಮಶೀಲತೆ ನವೋದ್ಯಮದಲ್ಲಿ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ 2021ರಲ್ಲಿ 20ಕ್ಕೂ ಹೆಚ್ಚಿನ ನವೋದ್ಯಮಗಳು ತಲಾ ಒಂದು ಬಿಲಿಯನ್ ಡಾಲರ್​ಗಳಷ್ಟು ಹೂಡಿಕೆ ಮಾಡಿವೆ. ಇವು ಯಶಸ್ವಿ ಉದ್ಯಮಗಳಾಗಿವೆ. ರಾಜ್ಯದಲ್ಲಿ 2022ರಲ್ಲಿ ಎಜುಟೆಕ್, ಫಿನ್​ಟೆಕ್ ಮತ್ತು ಹೆಲ್ತ್​ಟೆಕ್ ವಲಯದಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತವೆ. ಜೀವನದಲ್ಲಿ ಒಮ್ಮೆಇಂತಹ ಅವಕಾಶ ಲಭ್ಯವಾಗುತ್ತದೆ. ರಾಜ್ಯದ ಸ್ಟಾರ್ಟಪ್​ಗಳು ಈ ವಲಯದಲ್ಲಿ ಪ್ರಭಾವ ಬೀರಲಿವೆ. ಆರ್ಟಿಫಿಶಿಯಲ್ ಇಂಜಿನಿಯರಿಂಗ್ ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಮೂಲಭೂತ ತಂತ್ರಜ್ಞಾನವಾಗಿದೆ. ಮಾಹಿತಿ ತಂತ್ರಜ್ಞಾನ ಉದ್ದಿಮೆಗಳಿಗೆ ಅಗತ್ಯವಾದ ಆರ್ಟಿಫಿಶಿಯಲ್ ಇಂಜಿನಿಯರಿಂಗ್ ಮತ್ತು ಮಷಿನ್ ಲರ್ನಿಂಗ್​ನಲ್ಲಿ ಅವಕಾಶಗಳು ಹೆಚ್ಚಿವೆ. ಕೃಷಿ ಉತ್ಪಾದನೆ ಸರಪಳಿ ವಲಯದಲ್ಲಿಯೂ ಸ್ಟಾರ್ಟಪ್​ಗಳನ್ನು ಸ್ಥಾಪಿಸಬಹುದಾಗಿದೆ. 2022 ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡೀಪ್​ಟೆಕ್ ಕ್ಷೇತ್ರದಲ್ಲಿ ಹೆಚ್ಚು ಸ್ಟಾರ್ಟಪ್​ಗಳನ್ನು ಸ್ಥಾಪನೆ ಮಾಡಬಹುದಾಗಿದೆ. ಡೀಪ್ ಟೆಕ್​ನಲ್ಲಿ ಸಿಂಥೆಟಿಕ್ ಬಯಾಲಜಿ, ನ್ಯಾನೋ ಟೆಕ್ನಾಲಜಿ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್​ನಲ್ಲಿ ಉಳಿದ ವಲಯಗಳಿಗಿಂತ ಹೆಚ್ಚಿನ ಅವಕಾಶಗಳಿವೆ.