ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!
| ಪರಮೇಶ್ವರ ಗುಂಡ್ಕಲ್ ಬಿಜಿನೆಸ್ ಹೆಡ್, ಕಲರ್ಸ್ ಕನ್ನಡ ಟಿವಿ ಚಾನೆಲ್, ಬೆಂಗಳೂರು
ದೃಶ್ಯ ಮಾಧ್ಯಮದಲ್ಲಿ ಕಿರುತೆರೆ ಸೇರಿದಂತೆ ಬೇರೆಬೇರೆ ಮಾಧ್ಯಮಗಳಲ್ಲಿ ವಿಭಿನ್ನ ಕಥೆಗಳನ್ನು ಹೇಳುವ ಟ್ರೆಂಡ್ ಹೆಚ್ಚಾಗುತ್ತಿದೆ. ಟಿವಿ ಧಾರಾವಾಹಿಗಳು ಅಥವಾ ಕಾರ್ಯಕ್ರಮಗಳಿರಬಹುದು, ಫೇಸ್ಬುಕ್ ಸ್ಟೋರಿಗಳಿರಬಹುದು, ಇನ್ಸ್ಟಾಗ್ರಾಂ ರೀಲ್ಗಳಿರಬಹುದು, ಟ್ವಿಟರ್ನಲ್ಲಿ ಹಾಕುವ ವಿಡಿಯೋ ಗಳಿರಬಹುದು... ಹೀಗೆ ಬೇರೆಬೇರೆ ವೇದಿಕೆಗಳಲ್ಲಿ ಕಥೆ ಹೇಳುವ ಟ್ರೆಂಡ್ ದೊಡ್ಡ ಮಟ್ಟದಲ್ಲಿದೆ. ದೃಶ್ಯ ಮಾಧ್ಯಮದಲ್ಲಿ ಯಾರಿಗೆ ಕಥೆ ಹೇಳುವುದಕ್ಕೆ ಸಾಧ್ಯವಾಗುವುದೋ ಅವರಿಗೆ ಹೆಚ್ಚುಹೆಚ್ಚು ಅವಕಾಶಗಳಿದ್ದು, ಯಾವ ವರ್ಷವೂ ಇಷ್ಟೊಂದು ಅವಕಾಶಗಳು ಸೃಷ್ಟಿಯಾಗಿರಲಿಲ್ಲ. ಅದು ಈ ವರ್ಷ ಆಗುವುದರಲ್ಲಿದೆ. ಆ ಮಟ್ಟಿಗೆ ಇದೊಂದು ಮಹತ್ವದ ವರ್ಷ. ಎರಡನೆಯದಾಗಿ ಭಾಷೆಗಳನ್ನು ಮೀರಿ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಮಾಡುವ ಕಥೆ ಬರೀ ಕನ್ನಡಕ್ಕೆ ಸೀಮಿತವಾಗಿರಬೇಕಿಲ್ಲ. ಅದು ಬರೀ ಕನ್ನಡದ ಕಥೆಯೇ ಆಗಿರಬೇಕಿಲ್ಲ. ಕನ್ನಡದಲ್ಲಿ ಮಾಡಿದ್ದರೂ ಬೇರೆ ಭಾಷೆಗಳಿಗೂ ಹೋಗುವ ಸಾಧ್ಯತೆ ಇದೆ. ಈ ರೀತಿಯ ದೊಡ್ಡ ಸ್ಫೋಟ ಅಥವಾ ಬೆಳವಣಿಗೆ ಆಗುವಾಗ, ದೃಶ್ಯ ಮಾಧ್ಯಮದಲ್ಲಿ ತೊಡಗಿಸಿಕೊಂಡವರಿಗೆ ದೊಡ್ಡ ಬೆಳವಣಿಗೆ ನೋಡುವುದಕ್ಕೆ ಸಾಧ್ಯವಾಗುತ್ತದೆ. ಯಾರೇ ಆದರೂ ಈ ಕ್ಷೇತ್ರದಲ್ಲಿ ಈಗ ತೊಡಗಿಸಿಕೊಳ್ಳುವುದಕ್ಕೆ ಬಹಳ ಒಳ್ಳೆಯ ಸಮಯ. ಕನ್ನಡಕ್ಕಂತೂ ಈ ವರ್ಷ ಬಹಳ ಅತ್ಯುತ್ತಮವಾಗಿದೆ. ಕನ್ನಡದ ಕಂಟೆಂಟ್ ಭಾಷೆಯ ಗಡಿ ದಾಟಿ ದೇಶದ ಮತ್ತು ಜಗತ್ತಿನ ಬೇರೆಬೇರೆ ಕಡೆ ಹೋಗುವ ಸಾಧ್ಯತೆ ಇದೆ.