ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ನಿತಿನ್ ಷಾ ವ್ಯವಸ್ಥಾಪಕ ನಿರ್ದೇಶಕರು, ಸಪ್ನ ಬುಕ್ ಹೌಸ್
ಪುಸ್ತಕೋದ್ಯಮಕ್ಕೆ ಆಗಮಿಸುವವರಲ್ಲಿ ಮೊದಲಿಗೆ ಧನಾತ್ಮಕ ಮನಸ್ಸು ಇರಬೇಕು. ಪ್ರಾರಂಭದಲ್ಲಿ ಹಿನ್ನಡೆ ಆಗುತ್ತದೆ, ಅದನ್ನು ಮೀರಿ ಮುನ್ನಡೆಯುವ ಚಿಂತನೆಯನ್ನು ಹೊಂದಿರಬೇಕು. ಹೊಸದಾಗಿ ಆಗಮಿಸುವವರಿಗೆ ಸಂಪರ್ಕವೇ ಅತಿ ಮುಖ್ಯ. ಪುಸ್ತಕಗಳ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವೇ ಪರಿಣಾಮಕಾರಿ ಮಾಧ್ಯಮ. ಕೃತಿಗಳ ಪ್ರಕಟಣೆಯಲ್ಲಿ ಒಂದು ಕ್ಷೇತ್ರಕ್ಕೆ ಸೀಮಿತ ಆಗಬಾರದು. ಉತ್ತಮ ಲೇಖಕರನ್ನು ಸಂಪರ್ಕದಲ್ಲಿರಿಸಿಕೊಳ್ಳಬೇಕು. ಈಗಾಗಲೆ ಪ್ರಸಿದ್ಧರಾಗಿರುವವರ ಜತೆಗೆ ಸೊಗಸಾಗಿ ಬರೆಯುವ ಯುವ ಲೇಖಕರ ಮಿಶ್ರಣವನ್ನೂ ಪುಸ್ತಕಗಳು ಹೊಂದಿರಬೇಕು. ಕೆಲವರಿಗೆ ಒಂದೇ ವರ್ಷಕ್ಕೆ ಸಫಲತೆ ಸಿಕ್ಕರೆ ಕೆಲವರಿಗೆ ಐದಾರು ವರ್ಷವಾದರೂ ಸಿಗುವುದಿಲ್ಲ. ಸಫಲತೆಗೆ ತಾಳ್ಮೆ ಹಾಗೂ ಪರಿಶ್ರಮ ಎರಡೂ ಮುಖ್ಯ. ಕನಿಷ್ಠ 2-3 ವರ್ಷ ಎಷ್ಟೇ ಹಿನ್ನಡೆಯಾದರೂ, ನಷ್ಟವಾದರೂ ಸಹಿಸಿಕೊಂಡು ಮುಂದುವರಿಯುವ ದೃಢ ನಿರ್ಧಾರ ಇರಬೇಕು. ಈಗಿನ ಉತ್ತಮ ಸಂಗತಿ ಏನೆಂದರೆ ಐದಾರು ವರ್ಷದ ಹಿಂದಿನ ಹೋಲಿಕೆಯಲ್ಲಿ ಕನ್ನಡ ಪುಸ್ತಕಗಳು ಉತ್ತಮ ರೀತಿಯಲ್ಲಿ ಮಾರಾಟ ಆಗುತ್ತಿವೆ. ಕೋವಿಡ್ ನಂತರದಲ್ಲಿ ಕನ್ನಡ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಿದೆ. ಈ ಅವಕಾಶವನ್ನು ಬಳಸಿಕೊಂಡು, ಓದುಗರಿಗೆ ಗುಣಮಟ್ಟದ ಕೃತಿಗಳನ್ನು ನೀಡುವುದರ ಮೂಲಕ ಉದ್ಯಮದಲ್ಲಿ ಸಫಲತೆ ಸಾಧಿಸಬಹುದು.