ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ಡಾ. ಬಿ.ಎಲ್. ಚಿದಾನಂದ ಪ್ರಾಧ್ಯಾಪಕರು, ಪ್ರಾಣಿಶಾಸ್ತ್ರ, ಕೃಷಿ ವಿವಿ, ಬೆಂಗಳೂರು
ಪಶು ಸಂಗೋಪನೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಅವಕಾಶಗಳನ್ನು ತರುತ್ತಿದೆ. ಲಾಭದಾಯಕವೂ ಆಗುತ್ತಿದೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಹಸು ಮತ್ತು ಎಮ್ಮೆಗಳಲ್ಲಿ ಭ್ರೂಣ ವರ್ಗಾವಣೆ ಅತ್ಯಂತ ಮುಖ್ಯ. ನ್ಯಾಷನಲ್ ಲೈವ್ ಸ್ಟಾಕ್ ಮಿಷನ್ ಈ ನಿಟ್ಟಿನಲ್ಲಿ ನೆರವು ನೀಡುತ್ತದೆ. ಇಲ್ಲಿನ ಹಸು ಮತ್ತು ಎಮ್ಮೆಗಳಿಗೆ ಬೇರೆ ಬೇರೆ ಭ್ರೂಣ ವರ್ಗಾವಣೆ ಮಾಡಿದಾಗ ಅವು ನೀಡುವ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಬರುತ್ತದೆ. 30ರಿಂದ 50 ಲೀಟರ್ ತನಕ ಹಾಲು ನೀಡುವ ಭ್ರೂಣಗಳನ್ನು ವರ್ಗಾವಣೆ ಮಾಡಬಹುದಾಗಿದೆ. ಭ್ರೂಣ ಶಾಲೆಗಳನ್ನು ಸ್ಥಾಪಿಸಲು ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ನೆರವು ನೀಡುತ್ತಿವೆ. ಕಡಿಮೆ ಬಂಡವಾಳದಲ್ಲಿ ರೈತರಿಗೆ ಆದಾಯ ತರುವ ಜಾನುವಾರುಗಳೆಂದರೆ ಮೇಕೆ ಮತ್ತು ಕುರಿ. ಹಾಲು ಮತ್ತು ಮಾಂಸ ಎರಡಕ್ಕೂ ಬಳಕೆ ಮಾಡಬಹುದು. ಇದರ ಹಾಲು ಪೌಷ್ಟಿಕ. ಆರ್ಥಿಕತೆಗೂ ಅನುಕೂಲ. ಚೀಸ್, ಸೋಪು ಮತ್ತು ಫೇಷಿಯಲ್ ಕ್ರೀಂ ಮಾಡಲು ಬಳಸಲಾಗುತ್ತದೆ. ಮೇಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಿದರೆ ಹಾಲಿನ ಉದ್ಯಮ ಮಾಡಬಹುದಾಗಿದೆ. ಮೇಕೆಗಳಲ್ಲಿಯೂ ಹೆಚ್ಚಿನ ಹಾಲು ಕೊಡುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಹಂದಿ ಸಾಕಾಣಿಕೆಯೂ ಈಗೀಗ ಉದ್ಯಮವಾಗುತ್ತಿದೆ. ಕೋಳಿ ಸಾಕಣೆ ಮಾಡಿದರೆ ಮೊಟ್ಟೆಗಳನ್ನು ವಿದೇಶಕ್ಕೂ ರಫ್ತು ಮಾಡಬಹುದಾಗಿದೆ.