ನ್ಯೂಸ್

ನೂರ್ ಖಾನ್ ವಾಯುನೆಲೆ ಛಿದ್ರ! 'ಆಪರೇಷನ್ ಸಿಂಧೂರ' ಕುರಿತು ಬೆಳಗ್ಗೆ 10:30 ಗಂಟೆಗೆ ಭಾರತೀಯ ಸೇನೆ ಸುದ್ದಿಗೋಷ್ಠಿ | Operation Sindoor

Operation Sindoor: ಪಾಕಿಸ್ತಾನದ ಯುದ್ಧ ಮಾತಿಗೆ ತಕ್ಕ ಉತ್ತರವನ್ನೇ ರವಾನಿಸಿರುವ ಭಾರತೀಯ ಸೇನೆ, ಪ್ರತೀಕಾರದ ಬಿಸಿಯನ್ನು ಪಾಕಿಸ್ತಾನಕ್ಕೆ ಮುಟ್ಟಿಸಿದೆ. ಲಾಹೋರ್​, ರಾವಲ್​ಪಿಂಡಿ, ಕರಾಚಿ ಬಂದರು ಸೇರಿದಂತೆ ಪಾಕ್​ನ ಹಲವು ಪ್ರದೇಶಗಳು ಭಾರತದ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತತ್ತರಿಸಿ ಹೋಗಿವೆ. ಇಷ್ಟಾದರೂ ಸುಮ್ಮನಾಗ ಪಾಕ್​ ಕುತಂತ್ರಿಗಳು, ತಡರಾತ್ರಿಯೂ ಭಾರತದ ಮೇಲೆ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿತು. ಈ ವೇಳೆ ನೂರ್​ ಖಾನ್ ವಾಯುನೆಲೆ ಸೇರಿದಂತೆ ಪಾಕ್​ನ ಇನ್ನೆರೆಡು ವಾಯುನೆಲೆಯನ್ನು ಭಾರತ ಉಡೀಸ್ ಮಾಡಿದೆ.

ಇಂದು (ಮೇ.10) ಮುಂಜಾನೆ, ಶ್ರೀನಗರ ಸೇನಾ ನೆಲೆಯಿಂದ ಉಡಾಯಿಸಿದ ಭಾರತೀಯ ಕ್ಷಿಪಣಿಗಳು ಎರಡು ಪಾಕಿಸ್ತಾನಿ ವಾಯುಪಡೆಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿವೆ. ಒಂದು ಪಾಕಿಸ್ತಾನದ ಯುದ್ಧ ವಿಮಾನವು ಶ್ರೀನಗರದ ಲಸ್ಜನ್ ಬಳಿ ಪತನಗೊಂಡರೆ, ಮತ್ತೊಂದು ಉತ್ತರ ಕಾಶ್ಮೀರದಲ್ಲಿ ಪತನಗೊಂಡಿದೆ. ಮತ್ತೊಂದೆಡೆ, ಪಾಕಿಸ್ತಾನ ಸೇನೆಯು ದೆಹಲಿಯನ್ನು ಗುರಿಯಾಗಿಸಿಕೊಂಡು, ಹಲವೆಡೆ ದಾಳಿ ಮಾಡಲು ಯೋಜಿಸಿದೆ. ಇದೇ ಉದ್ದೇಶದಲ್ಲಿ ಫತೇಹ್-2 ಕ್ಷಿಪಣಿ ಉಡಾಯಿಸಿ ಮರುಕ್ಷಣವೇ ಅದನ್ನು ಭಾರತೀಯ ಸೇನೆ ಛಿದ್ರಗೊಳಿಸಿತು.

ತನ್ನ ನರಿ ಬುದ್ಧಿಯನ್ನು ಬಿಡದ ಪಾಕಿಸ್ತಾನಕ್ಕೆ ಪಾಠ ಕಲಿಸಲು, ಪಾಕ್​ನ ಮೂರು ವಾಯು ನೆಲೆಗಳಾದ ರಾವಲ್ಪಿಂಡಿಯಲ್ಲಿನ ನೂರ್ ಖಾನ್ ವಾಯುನೆಲೆ, ಚಕ್ವಾಲ್ ನಗರದ ಮುರಿಯದ್ ವಾಯುನೆಲೆ ಮತ್ತು ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಯ ಮೇಲೆ ಸೇನೆ ದಾಳಿ ನಡೆಸಿತು. ಈ ಮೂರರ ಪೈಕಿ ನೂರ್ ಖಾನ್ ವಾಯುನೆಲೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. ಭಾರತೀಯ ಸೇನೆಯ ಪ್ರತೀಕಾರದ ಕ್ರಮಗಳಿಂದ ಕಂಗಾಲಾಗಿರುವ ಪಾಕಿಸ್ತಾನ, ತನ್ನ ದೇಶದ ಬಹುತೇಕ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಮಧ್ಯಾಹ್ನ 12 ಗಂಟೆಯವರೆಗೆ ಎಲ್ಲಾ ವಾಯುಪ್ರದೇಶಗಳನ್ನು ಮುಚ್ಚಲು ಆದೇಶಿಸಿದೆ.

ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮಾತನಾಡಿ, ಪಾಕ್​ನ ಮೂರು ಪ್ರಮುಖ ವಾಯುನೆಲೆಗಳ ಮೇಲಿನ ದಾಳಿಯನ್ನು ದೃಢಪಡಿಸಿದರು. ಆದಾಗ್ಯೂ, ಸೂಕ್ತವಾಗಿ ಪ್ರತಿಕ್ರಿಯಿಸುವುದಾಗಿ ದೇಶದ ಸೇನೆ ಹೇಳಿದೆ. ಭಾರತದ ಮೇಲಿನ ದಾಳಿಯನ್ನು ಪಾಕಿಸ್ತಾನ 'ಆಪರೇಷನ್ ಬನ್ಯನ್-ಅನ್-ಮರ್ಸೂಸ್' ಎಂದು ಹೆಸರಿಸಿದೆ. ಆದಾಗ್ಯೂ, ಪಾಕಿಸ್ತಾನದಲ್ಲಿ ನಡೆದ ದಾಳಿಗಳ ಕುರಿತು ಭಾರತೀಯ ವಾಯುಪಡೆ ಅಥವಾ ಸೇನೆಯಿಂದ ಯಾವುದೇ ಹೇಳಿಕೆ ಬಂದಿಲ್ಲ. ಈ ಕುರಿತು ಭಾರತೀಯ ಸೇನೆ ಇಂದು ಬೆಳಗ್ಗೆ 10:30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದೆ,(ಏಜೆನ್ಸೀಸ್).