ನವದೆಹಲಿ: ವ್ಯಾಕರಣದಲ್ಲಿ ಕರ್ಮಣಿ ಪ್ರಯೋಗ, ಕರ್ತರಿ ಪ್ರಯೋಗ ಎಂಬುದು ಬರುತ್ತದೆ. ಆದರೆ ಇಲ್ಲೊಬ್ಬ ಯುವಕ ತ್ರಿಕರಣಪೂರ್ವಕವಾಗಿ ಅಂದರೆ ಕಾಯಾ, ವಾಚಾ, ಮನಸಾ ಪ್ರೇಯಸಿಯನ್ನು ಮದುವೆಯಾಗಿ ಸಂಸಾರದ ವ್ಯಾಕರಣವನ್ನೇ ಹಾಳು ಮಾಡಿಕೊಂಡಂತಾಗಿದೆ. ಅರ್ಥಾತ್, ಪ್ರೀತಿಸಿದ ಯುವತಿಯನ್ನು ಕರೆದೊಯ್ದು ಕರಿಮಣಿ ಪ್ರಯೋಗ ಮಾಡಿದ್ದಕ್ಕೆ ಆಕೆಯ ಮನೆಯವರು ಆತನ ಮೇಲೇ ಕತ್ತರಿ ಪ್ರಯೋಗ ಮಾಡಿದ್ದಾರೆ. ಪರಿಣಾಮವಾಗಿ 22 ವರ್ಷದ ಈ ಯುವಕ ಮುಂದೆ ಸಂಸಾರ ಮಾಡುವುದಕ್ಕೂ ಯೋಚನೆ ಮಾಡುವಂತಾಗಿದೆ.
ನೇರವಾಗಿ ಹೇಳಬೇಕೆಂದರೆ, ಯುವಕನೊಬ್ಬ ತಮ್ಮ ಮಗಳನ್ನು ಪ್ರೀತಿಸಿ, ಕರೆದೊಯ್ದು ಮದುವೆಯಾದ ಎಂಬ ಕಾರಣಕ್ಕೆ ಹುಡುಗಿ ಕಡೆಯವರು ಆತನನ್ನು ಎತ್ತಿ ಹಾಕಿಕೊಂಡು ಬಂದು ಥಳಿಸಿದ್ದಲ್ಲದೇ ಅವನ ಜನನಾಂಗವನ್ನೇ ಕತ್ತರಿಸಿದ ಕರುಣಾಜನಕ ಪ್ರಕರಣವೊಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಸಗರ್ಪುರ ಎಂಬಲ್ಲಿ ಇಂಥದ್ದೊಂದು ಕ್ರೂರ ಘಟನೆ ನಡೆದಿದೆ. ಹುಡುಗಿಯ ತಂದೆ, ಸಹೋದರ ಹಾಗೂ ಮಾವ ಸೇರಿ ಈ ರೀತಿ ಮಾಡಿದ್ದಾಗಿ ಸಂತ್ರಸ್ತ ಹೇಳಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಕರ್ತವ್ಯಲೋಪ ತೋರಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಗೌತಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾವಿಬ್ಬರು ಮೂರು ವರ್ಷಗಳಿಂದ ಸ್ನೇಹಿತರಾಗಿದ್ದು, ಕೆಲವು ದಿನಗಳ ಹಿಂದೆ ನ್ಯಾಯಾಲಯದಲ್ಲಿ ಮದುವೆಯಾಗಿದ್ದೇವೆ. ಬುಧವಾರ ನಾವಿಬ್ಬರೂ ಹೇಳಿಕೆ ನೀಡುವ ಸಲುವಾಗಿ ರಜೌರಿ ಗಾರ್ಡನ್ ಪೊಲೀಸ್ ಸ್ಟೇಷನ್ಗೆ ಹೋಗಿದ್ದೆವು. ಅದೇ ಸಂದರ್ಭದಲ್ಲಿ ಹುಡುಗಿ ಮನೆಯವರು ಅಲ್ಲಿಗೆ ಬಂದಿದ್ದರು.
ಹುಡುಗಿ ಕಡೆಯವರು ಅವಳ ಜೊತೆ ನನ್ನನ್ನು ಪೊಲೀಸ್ ಸ್ಟೇಷನ್ ಎದುರಿನಲ್ಲೇ ಬಲವಂತವಾಗಿ ವಾಹನಕ್ಕೆ ತುಂಬಿಕೊಂಡು ಅವರ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ತಂದೆ, ಸಹೋದರ, ಮಾವ ಮೂವರೂ ಸೇರಿ ನನ್ನನ್ನು ಬಡಿದಿದ್ದು, ಜನನಾಂಗವನ್ನೇ ಕತ್ತರಿಸಿದ್ದಾರೆ ಎಂದು ಸಂತ್ರಸ್ತನ ಅಲವತ್ತುಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ಯುವಕ ನವದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಜೌರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಗಿ ಮನೆಯವರ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.