ನ್ಯೂಸ್

VIDEO |ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ ಬಿಗ್ ಬಾಸ್ ವಿಜೇತ! ಈಗಲೇ ಆತನನ್ನು ಬಂಧಿಸಿ ಎಂದ ನೆಟ್ಟಿಗರು

ನವದೆಹಲಿ: ಗುರುಗ್ರಾಮ್ ಮೂಲದ ಹೆಸರಾಂತ ಯುಟ್ಯೂಬರ್ ಮ್ಯಾಕ್ಸ್ಟರ್ನ್​​​ಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್​ ಒಟಿಟಿ 2 ವಿಜೇತ ಮತ್ತು ಜನಪ್ರಿಯ ಯುಟ್ಯೂಬರ್ ಎಲ್ವಿಶ್ ಯಾದವ್ ಮೇಲೆ ಇದೀಗ ನೆಟ್ಟಿಗರು ಕೆಂಡಕಾರಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಘಟನೆಯಲ್ಲಿ ಭಾಗಿಯಾಗಿದ್ದ ಯಾದವ್,​ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೊಮ್ಮೆ ಇಂತಹದ್ದೇ ಘಟನೆಗೆ ಸಿಲುಕಿದ್ದು, ವಿಡಿಯೋ ನೋಡಿದ ಅನೇಕರು ಇವನನ್ನು ಈ ಕೂಡಲೇ ಬಂಧನಕ್ಕೆ ಒಳಪಡಿಸಿ ಎಂದು ಆಗ್ರಹಿಸಿದ್ದಾರೆ.

ಗುರುವಾರ ಗುರುಗ್ರಾಮ್ ಮೂಲದ ಯೂಟ್ಯೂಬರ್ ಮ್ಯಾಕ್ಸ್‌ಟರ್ನ್ (ಸಾಗರ್ ಠಾಕೂರ್) ಮೇಲೆ ಎಲ್ವಿಶ್ ಕಪಾಳಮೋಕ್ಷ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಕುರಿತು ಶುಕ್ರವಾರ (ಮಾ.08) ಬೆಳಗ್ಗೆ 1.20ಕ್ಕೆ ಮ್ಯಾಕ್ಸ್‌ಟರ್ನ್ ತನ್ನ ಎಕ್ಸ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ತನ್ನ ವೀಡಿಯೊದಲ್ಲಿ, ಸುಮಾರು 8-10 ಜನರು ಅವರ ಮೇಲೆ ದಾಳಿ ಮಾಡಿ, ಹಲ್ಲೆಗೈದಿದ್ದು, ಕಡೆಯಲ್ಲಿ ಕೊಲ್ಲುವುದಾಗಿ ಕೂಡ ಬೆದರಿಕೆಯೊಡ್ಡಿದ್ದಾರೆ ಎಂದು ಮ್ಯಾಕ್ಸ್‌ಟರ್ನ್ ದೂರಿದ್ದಾರೆ.

ತಮ್ಮ ಮೇಲೆ ಎಲ್ವಿಶ್ ಹಾಗೂ ಆತನ ಸಹಚರರು ದಾಳಿ ಮಾಡಿದ ವೀಡಿಯೊವನ್ನು ಹಂಚಿಕೊಂಡ ಮ್ಯಾಕ್ಸ್‌ಟರ್ನ್, ಜಗಳ ನಡೆದ ಬಳಿಕ ತಮ್ಮ ತುಟಿ ಗಾಯಗೊಂಡಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಎಲ್ವಿಶ್ ಮತ್ತು ಮ್ಯಾಕ್ಸ್ಟರ್ನ್ ಅವರ ಗಲಭೆಯ ಸಂಪೂರ್ಣ ವೀಡಿಯೋ ಎಕ್ಸ್​ನಲ್ಲಿ​ (ಈ ಹಿಂದಿನ ಟ್ವಿಟರ್​) ಪೋಸ್ಟ್​ ಆದ ಕೆಲವೇ ನಿಮಿಷಗಳಲ್ಲಿ ಭಾರೀ ವೈರಲ್ ಆಯಿತು. ಮಾಧ್ಯಮ ವರದಿಗಳ ಪ್ರಕಾರ, ISPL ಪಂದ್ಯದ ಸಮಯದಲ್ಲಿ ಎಲ್ವಿಶ್ ಯಾದವ್ ಮತ್ತು ಮುನಾವರ್ ಫರುಕಿ ಅವರ ಗ್ಯಾಂಗ್​ ಬಗ್ಗೆ ಮ್ಯಾಕ್ಸ್‌ಟರ್ನ್ ಕೆಲವು ಅಸಹ್ಯಕರ ಕಮೆಂಟ್‌ಗಳನ್ನು ಮಾಡಿದರು ಎಂದು ಆತನ ಮೇಲೆ ಯಾದವ್ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಈ ಜಟಾಪಟಿಯ ವೀಡಿಯೊ ವೈರಲ್ ಆದ ತಕ್ಷಣವೇ ನೆಟ್ಟಿಗರು, ಎಲ್ವಿಶ್ ಯಾದವ್​ನನ್ನು ಭಾರೀ ಟ್ರೋಲ್ ಮಾಡುವ ಮೂಲಕ ಟೀಕಿಸಿದ್ದಾರೆ. "ಇದು ಅಪರಾಧ, ಅಪ್ರಾಪ್ತ ವಯಸ್ಕನನ್ನು ಹೊಡೆದಿದ್ದಕ್ಕಾಗಿ ಎಲ್ವಿಶ್ ವಿರುದ್ಧ ಪ್ರಕರಣ ದಾಖಲಿಸಬೇಕು" ಎಂದು ಒಬ್ಬರು ಬರೆದರೆ. ಮತ್ತೊಬ್ಬರು, "ಎಲ್ವಿಶ್ ಮತ್ತು ಅವರ ತಂಡದ ವಿರುದ್ಧ ಗಂಭೀರವಾಗಿ ಕ್ರಿಮಿನಲ್ ಪ್ರಕರಣದ ಅಗತ್ಯವಿದೆ" ಎಂದು ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).