Mallikarjun Kharge: ಸಂಸತ್ತಿನ ಆವರಣದಲ್ಲಿ ಉಪಸ್ಥಿತರಿದ್ದು, ಸದನಕ್ಕೆ ಗೈರು ಹಾಜರಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಲು ಎದ್ದು ನಿಲ್ಲುತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿ, ಪಿಎಂ, ಪಿಎಂ ಘೋಷಣೆಗಳನ್ನು ಕೂಗುತ್ತಾ, ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಷಯದ ಬಗ್ಗೆ ಮಾತನಾಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ:ಬನ್ನಂಜೆ ಡಿವೈಡರ್ ತೆರವು ವಿಚಾರದಲ್ಲಿ ಕೋಲಾಹಲ
ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಪ್ರಧಾನಿ ತಮ್ಮ ಕಚೇರಿಯಲ್ಲಿ ಬೇರೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಈ ವಿಷಯದ ಬಗ್ಗೆ ಈಗಾಗಲೇ ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ, ನೀವು ಪ್ರಧಾನಿ ಮೋದಿಯವರಿಂದ ಕೇಳ ಬಯಸುವ ಉತ್ತರವನ್ನು ನಾನೇ ನೀಡುತ್ತೇನೆ, ನಿಮ್ಮ ಗೊಂದಲಗಳನ್ನು ಪರಿಹರಿಸುತ್ತೇನೆ ಎಂಬ ಭರವಸೆ ನೀಡಿದರು. ಈ ಮಾತಿನಿಂದ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು ರಾಜ್ಯಸಭೆಯಿಂದ ಹೊರನಡೆದರು.
ಸದನದಿಂದ ಹೊರನಡೆದ ವಿಪಕ್ಷ ಸದಸ್ಯರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಷಾ, ಇಷ್ಟು ವರ್ಷಗಳ ಕಾಲ ತಮ್ಮ ಮತಬ್ಯಾಂಕ್ ರಕ್ಷಿಸಿಕೊಳ್ಳುವ ಸಲುವಾಗಿ ಭಯೋತ್ಪಾದನೆಯನ್ನು ತಡೆಯದೆ ಸುಮ್ಮನಿದ್ದ ಇವರುಗಳಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ, ಆಪರೇಷನ್ ಸಿಂಧೂರ ಕುರಿತ ಚರ್ಚೆ ಎಲ್ಲಿಯವರೆಗೆ ಬೇಕಾದರೂ ಮುಂದುವರಿಯಬಹುದು ಎನ್ನುವ ತೀರ್ಮಾನಕ್ಕೆ ಬರಲಾಗಿದ್ದು, ಈ ವಿಷಯವಾಗಿ ಯಾರು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಸರ್ಕಾರವೇ ನಿರ್ಧರಸಲಿದೆ ಎಂದು ತಿಳಿಸಿದರು.(ಏಜೆನ್ಸೀಸ್)