

ಉಡುಪಿ : ಬನ್ನಂಜೆ ಡಿವೈಡರ್ ತೆರವು ವಿಚಾರದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರಿಗೆ ಗೋಣಿಚೀಲಗಳು ಬಂದಿವೆ ಎಂಬ ನಾಮನಿರ್ದೇಶಿತ ಸದಸ್ಯರ ಆರೋಪಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಟಿ.ಜಿ. ಹೆಗ್ಡೆ ಮಾತನಾಡಿ, ಬನ್ನಂಜೆಯಲ್ಲಿ ಜಯಲಕ್ಷಿ$್ಮ ಅಂಗಡಿ ಎದುರು ರಾ.ಹೆ.ಯಲ್ಲಿ ರಸ್ತೆ ವಿಭಾಜಕವನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಈ ಬಗ್ಗೆ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ನಗರಸಭೆ ಮತ್ತು ಸದಸ್ಯರನ್ನು ಗುರಿಯಾಗಿಸಿಕೊಂಡು ಅಸಂಬದ್ಧ ಹೇಳಿಕೆ ನೀಡಿದ್ದು, ಪತ್ರಿಕೆಗಳಲ್ಲೂ ಪ್ರಕಟವಾಗಿದೆ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಸವಿತಾ ರಾಮ್, ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡಿರುವ ನಾಮನಿರ್ದೇಶಿತ ಸದಸ್ಯರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಏರುದನಿಯಲ್ಲಿ ಮಾತನಾಡಿದ ಸುರೇಶ್ ಶೆಟ್ಟಿ ಕ್ಷಮೆಯಾಚಿಸಲು ನಿರಾಕರಿಸಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು. ಪೌರಾಯುಕ್ತ ಮಹಂತೇಶ್ ಮಾತನಾಡಿ, ನಗರಸಭೆಯಿಂದ ಡಿವೈಡರ್ ತೆಗೆಸಿಲ್ಲ. ಯಾವುದೇ ವಾಹನ ಅಥವಾ ಸಿಬ್ಬಂದಿ ಕಳುಹಿಸಿಲ್ಲ. ನಮ್ಮ ಪಾತ್ರ ಕಿಂಚಿತ್ತೂ ಇಲ್ಲ. ಎಸ್ಪಿ ಪತ್ರದ ಆಧಾರದಲ್ಲಿ ರಾ.ಹೆ. ಇಂಜಿನಿಯರ್ಗಳು ಡಿವೈಡರ್ ಅಗಲಗೊಳಿಸಿದ್ದಾರೆಎಂದರು.
ನಗರಸಭೆಯಿಂದ ಸಹಕಾರ
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಲೋ ವೋಲ್ಟೇಜ್ ವಿದ್ಯುತ್, ಟ್ರಿಪ್ ಆಗುವುದು ನಡೆಯುತ್ತಿದೆ. ಅಪಾಯಕಾರಿ ಮರ ತೆರವು ಮಾಡಬೇಕು. ಬಿದ್ದ ಕಂಬಗಳನ್ನು ಕೂಡಲೇ ತೆಗೆದು ಹೊಸ ಕಂಬ ಅಳವಡಿಸಬೇಕು ಎಂದರು.
ಮೆಸ್ಕಾಂ ಇಂಜಿನಿಯರ್ ಗಣರಾಜ ಭಟ್ ಮಾತನಾಡಿ, ಮಳೆಗಾಲಕ್ಕಾಗಿಯೇ ಹೆಚ್ಚುವರಿ ಟಿಸಿ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮಣಿಪಾಲದಲ್ಲಿ ಲೈನ್ ಮ್ಯಾನ್ ಕೊರತೆಯಿಂದ ವಿದ್ಯುತ್ ಮಾರ್ಗ ದುರಸ್ತಿಗೊಳಿಸುವುದು ವಿಳಂಬವಾಗುತ್ತಿದೆ ಎಂದರು. ಸಭೆಯಲ್ಲಿ ಉಪಾಧ್ಯೆ ರಜನಿ ಹೆಬ್ಬಾರ್, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.