ನ್ಯೂಸ್

ಈ ರಾಜ್ಯಗಳಲ್ಲೂ ಒಮಿಕ್ರಾನ್​ ಭೀತಿ; ಅಟ್​-ರಿಸ್ಕ್​ ದೇಶಗಳಿಂದ ಮರಳಿದವರಿಗೆ ಕರೊನಾ ಪಾಸಿಟಿವ್​

ಹೈದರಾಬಾದ್​/ಮುಂಬೈ: ಕಳೆದೆರಡು ದಿನಗಳಲ್ಲಿ ತೆಲಂಗಾಣದ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ 'ಅಟ್​-ರಿಸ್ಕ್​' ದೇಶಗಳಿಂದ ಬಂದಿಳಿದ 13 ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕರೊನಾ ಪಾಸಿಟೀವ್ ಬಂದಿದೆ. ಈ ಸೋಂಕಿತರ ಸ್ಯಾಂಪಲ್​ಗಳನ್ನು ಗಚಿಬೌಲಿಯ ತೆಲಂಗಾಣ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ ಅಂಡ್ ರಿಸರ್ಚ್​​ಗೆ ಜೀನೋಮ್​ ಸೀಕ್ವೆಂಸಿಂಗ್​ಗಾಗಿ ಕಳುಹಿಸಲಾಗಿದೆ. ಪರೀಕ್ಷೆಯ ನಂತರ ಸೋಂಕು ಒಮಿಕ್ರಾನ್​ನಿಂದ ಉಂಟಾಗಿದೆಯೇ ಅಥವಾ ಡೆಲ್ಟಾ ವೇರಿಯೆಂಟ್​ನಿಂದ ಉಂಟಾಗಿದೆಯೇ ಎಂಬುದು ತಿಳಿಯಲಿದೆ.

ಶುಕ್ರವಾರದಂದು ಅಟ್​​-ರಿಸ್ಕ್​-ಕಂಟ್ರೀಸ್​ ಎಂದು ಹೆಸರಿಸಲಾಗಿರುವ ಒಮಿಕ್ರಾನ್​ ರೂಪಾಂತರಿ ಕಂಡುಬಂದಿರುವ ದೇಶಗಳಿಂದ 219 ಪ್ರಯಾಣಿಕರು ಹೈದರಾಬಾದ್​ಗೆ ಬಂದಿದ್ದು, ಅವರಲ್ಲಿ 9 ಜನರಿಗೆ ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟೀವ್​ ಬಂದಿದೆ. ಡಿಸೆಂಬರ್ 1 ರಿಂದ ವಿಮಾನ ನಿಲ್ದಾಣದಲ್ಲಿ 909 ಪ್ರಯಾಣಿಕರನ್ನು ಹೆಚ್ಚಿನ ಸ್ಕ್ರೀನಿಂಗ್​ಗೆ ಒಳಪಡಿಸಿದ್ದು, ಒಟ್ಟು 13 ಜನರಿಗೆ ಕರೊನಾ ಕಂಡುಬಂದಿದೆ.

ಮಹಾರಾಷ್ಟ್ರದಲ್ಲೂ 9 ಜನ ಪ್ರಯಾಣಿಕರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಅವರ ಸ್ಯಾಂಪಲ್​ಗಳನ್ನು ಜೀನೋಮ್​ ಸೀಕ್ವೆಂಸಿಂಗ್​ಗೆ ಕಳುಹಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್​ ದೇಶಗಳ ಪ್ರಯಾಣಿಕರ ಸ್ಕ್ರೀನಿಂಗ್​ ಕಟ್ಟುನಿಟ್ಟಾಗಿ ನಡೆಯುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. (ಏಜೆನ್ಸೀಸ್)