ಬೆಂಗಳೂರಿನ ಗರುಡಾ ಮಾಲ್​ನಲ್ಲಿ 2 ಡೋಸ್ ಲಸಿಕೆ ಪಡೆದವರ ದಾಖಲೆ ಪರಿಶೀಲಿಸಿ ಒಳಬಿಡುತ್ತಿರುವ ಸಿಬ್ಬಂದಿ. 
ನ್ಯೂಸ್

ಮಕ್ಕಳಿಗೂ ಒಮಿಕ್ರಾನ್ ಕಂಟಕ: ಹತ್ತು ದಿನದಲ್ಲಿ ರಾಜ್ಯದ 576 ಚಿಣ್ಣರಿಗೆ ಕೋವಿಡ್ ಸೋಂಕು...

| ಪಂಕಜ ಕೆ.ಎಂ. ಬೆಂಗಳೂರು

ವಿಶ್ವವನ್ನೇ ನಡುಗಿಸಿರುವ ಕೋವಿಡ್ ರೂಪಾಂತರಿ ಒಮಿಕ್ರಾನ್ ಭೀತಿ ಈಗ ಲಸಿಕೆ ಪಡೆಯದ 19 ವರ್ಷದೊಳಗಿನ ಮಕ್ಕಳಿಗೆ ಕಾಡಲಾರಂಭಿಸಿದೆ. ರಾಜ್ಯದಲ್ಲಿ ಕಳೆದ ಹತ್ತು ದಿನದಲ್ಲಿ 576 ಮಕ್ಕಳಿಗೆ ಕರೊನಾ ಸೋಂಕು ತಗುಲಿದ್ದು, ಅಂಗನವಾಡಿಗಳು, ಶಾಲಾ-ಕಾಲೇಜುಗಳಲ್ಲಿ ಕರೊನಾ ನಿಯಮಾವಳಿ ಬಿಗಿಗೊಳಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಮತ್ತೆ ಆನ್​ಲೈನ್ ತರಗತಿ ಆರಂಭಿಸಬೇಕೆಂಬ ಆಗ್ರಹವೂ ವ್ಯಕ್ತವಾಗುತ್ತಿದೆ.

ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಆರಂಭವಾದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಸೋಂಕು ಪ್ರಕರಣ ಏರಿಕೆಯಾಗುತ್ತಿವೆ. ಕಳೆದ 10 ದಿನದಲ್ಲಿ 0-9 ವರ್ಷದ 105 ಮಕ್ಕಳು ಹಾಗೂ 10-19 ವರ್ಷದ 471 ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಮಳೆ, ಚಳಿ ಕಾಟ: ಒಮಿಕ್ರಾನ್ ಭೀತಿ ಜತೆಗೆ ಕಳೆದ 1 ತಿಂಗಳಿಂದ ನಿರಂತರವಾಗಿ ಸುರಿದ ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ಮಕ್ಕಳಲ್ಲಿ ವೈರಲ್ ನ್ಯುಮೋನಿಯಾ, ಶ್ವಾಸಕೋಶದ ಸೋಂಕು, ಡೆಂಘ, ಚಿಕೂನ್ ಗುನ್ಯಾ, ರಿಕೆಟ್ಸೆಲ್, ಟೈಫಾಯಿಡ್​ನಂತಹ ವೈರಾಣು ಜ್ವರ ಪ್ರಕರಣ ಹೆಚ್ಚಾಗಿವೆ. ಇದೇ ವೇಳೆ ಕೋವಿಡ್ ಪ್ರಕರಣಗಳ ಏರಿಕೆಯೂ ಪಾಲಕರನ್ನು ಭೀತಿಗೆ ದೂಡಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವ ಪ್ರತಿ ಮಗುವಿಗೂ ಆರ್​ಟಿಪಿಸಿಆರ್ ಪರೀಕ್ಷೆಯ ಜತೆಗೆ ಆಂಟಿ ಬಾಡಿ ಪರೀಕ್ಷೆ ಸಹ ನಡೆಸಲಾಗುತ್ತಿದೆ ಎನ್ನುತ್ತಾರೆ ಮಕ್ಕಳ ತಜ್ಞರು.

ಕೇಸ್ ಹೆಚ್ಚಿದರೆ ಅಪಾಯ: ಒಮಿಕ್ರಾನ್ ಇತರ ರೂಪಾಂತರ ತಳಿಗಳಿಗಿಂತ ವೇಗವಾಗಿ ಹರಡುವ ಗುಣ ಹೊಂದಿದೆ. ಆದರೆ, ಸೋಂಕಿನ ತೀವ್ರತೆ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಕೋವಿಡ್ ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿವೆ ಇರುವುದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಆ ಮೂಲಕ ಇನ್ನೂ ಲಸಿಕೆ ಪಡೆಯದ ಮಕ್ಕಳನ್ನು ಸೋಂಕಿನಿಂದ ರಕ್ಷಿಸಬಹುದಾಗಿದೆ. ಕೋವಿಡ್​ನಿಂದ ಮಕ್ಕಳಿಗೆ ಹೆಚ್ಚಿನ ಅಪಾಯವಿಲ್ಲ. ಅದರೆ, ಎರಡನೇ ಅಲೆಯಲ್ಲಿ ಡೆಲ್ಟಾ ವೈರಸ್ ವ್ಯಾಪಕವಾಗಿ ಹರಡಿದಂತೆ ಒಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮಕ್ಕಳಿಗೆ ಅಪಾಯ ಆಗುವ ಸಾಧ್ಯತೆಗಳು ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ.

ಒಮಿಕ್ರಾನ್ ಕೋವಿಡ್​ನ ಪ್ರಭೇದಗಳಲ್ಲಿ ಒಂದು. ಆದರೆ ಡೆಲ್ಟಾಗಿಂತ ವೇಗವಾಗಿ ಹರಡುತ್ತದೆಯಾದರೂ, ತೀವ್ರತೆ ಕಡಿಮೆ ಇರುವುದರಿಂದ ಅತಂಕ ಪಡುವ ಅಗತ್ಯವಿಲ್ಲ. ಬದಲಿಗೆ ಇದುವರೆಗೂ ಪಾಲಿಸಿಕೊಂಡು ಬಂದಿರುವ ಕೋವಿಡ್ ನಿಯಮಗಳನ್ನು ಮುಂದುವರಿಸಿಕೊಂಡು ಹೋಗುವುದೊಂದೇ ಪರಿಹಾರ. | ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
ಕೋವಿಡ್ ಬಗ್ಗೆ ಗಾಬರಿ ಅಗತ್ಯವಿಲ್ಲ. ಈವರೆಗೂ ಪಾಲಿಸುತ್ತಿರುವ ನಿಯಮಗಳನ್ನು ಮುಂದುವರಿಸಬೇಕು. ಮಕ್ಕಳು ಸೇರಿದಂತೆ ಸಮುದಾಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಲಸಿಕೆ ಹಾಗೂ ಕೋವಿಡ್ ನಿಯಮಗಳ (ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ) ಪಾಲನೆಯೊಂದೇ ಪರಿಹಾರ. ಹಾಗಾಗಿ ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. | ಡಾ. ಲಕ್ಷ್ಮೀಪತಿ, ಮಕ್ಕಳ ತಜ್ಞ, ಕೆ.ಸಿ. ಜನರಲ್ ಆಸ್ಪತ್ರೆ ಬೆಂಗಳೂರು

ಮುನ್ನೆಚ್ಚರಿಕೆ ಕ್ರಮಗಳು

  • ಮಾಸ್ಕ್ , ಸಾಮಾಜಿಕ ಅಂತರ ಹಾಗೂ ಕೈಗಳ ಸ್ವಚ್ಛತೆ ಸೇರಿ ಕೋವಿಡ್ ನಿಯಮ ಪಾಲಿಸಬೇಕು
  • ಮಕ್ಕಳು ಇರುವ ಮನೆಯಲ್ಲಿ 18 ವರ್ಷ ಮೇಲ್ಪಟ್ಟಿರುವ ಎಲ್ಲರೂ ಲಸಿಕೆ ಪಡೆಯಬೇಕು
  • ಶಾಲೆಗಳಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು
  • ಸಭೆ ಸಮಾರಂಭಗಳಿಗೆ ಮಕ್ಕಳನ್ನು ಕರೆದೊಯ್ಯುವುದನ್ನು ನಿಯಂತ್ರಿಸಬೇಕು
  • ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಕೋವಿಡ್ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು
  • ಮನೆಯಲ್ಲಿ ತಯಾರಿಸಿದ ಆಹಾರ, ಕುಡಿಯಲು ಕಾಯಿಸಿ ಆರಿಸಿದ ನೀರನ್ನು ಕೊಡಬೇಕು
  • ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಮಕ್ಕಳಿಗೆ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಬೇಕು
  • ಶಾಲಾ ಬ್ಯಾಗ್ ಸೇರಿದಂತೆ ಪರಿಕರಗಳನ್ನು ಸ್ಯಾನಿಟೈಸ್ ಮಾಡಿ ಮನೆಯ ಒಳಗೆ ತೆಗೆದುಕೊಳ್ಳಬೇಕು

ಪಾಲಕರ ಬೇಡಿಕೆ?

  • ಅಂಗನವಾಡಿ ಕೇಂದ್ರ, ಶಾಲೆ ಹಾಗೂ ಕಾಲೇಜುಗಳಲ್ಲಿ ಕೋವಿಡ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು
  • ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು
  • ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಬೇಕು
  • ಶಾಲೆಯಲ್ಲಿ ಶಿಕ್ಷಕರು ಸೇರಿ ಎಲ್ಲ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪರಿಶೀಲಿಸಬೇಕು

ನಾಳೆ ಮಹತ್ವದ ಸಭೆ: ಒಮಿಕ್ರಾನ್ ಪ್ರಭಾವ, ಪರಿಣಾಮ ತಡೆಗೆ ಬಿಗಿ ಕ್ರಮ ಕೈಗೊಂಡಿರುವ ಸರ್ಕಾರ, ಕ್ರಿಸ್​ವುಸ್ ಹಬ್ಬ ಹಾಗೂ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಮೂರು ಪ್ರಕರಣವಿದ್ದರೆ ಕ್ಲಸ್ಟರ್

ಬೆಂಗಳೂರು: ಕೋವಿಡ್​ನ ಮೂರು ಪ್ರಕರಣ ಕಂಡುಬಂದಲ್ಲಿ ಕ್ಲಸ್ಟರ್ ಎಂದು ಘೊಷಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಸೋಂಕಿಗೆ ಡೆಲ್ಟಾ ಚಿಕಿತ್ಸೆಯನ್ನೇ ನೀಡ ಲಾಗುತ್ತಿದೆ ಎಂದು ಅವರು ಹೇಳಿದರು. ಒಮಿಕ್ರಾನ್ ಕುರಿತು ಪ್ರಾಥಮಿಕ ವರದಿ ಬಂದಿದ್ದು, ಪೂರ್ಣ ಪ್ರಮಾಣದ ವರದಿ ಪಡೆಯಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಅನುಸರಿಸುತ್ತಿರುವ ಚಿಕಿತ್ಸಾ ನಿಯಮಗಳನ್ನು ತಿಳಿದು ಕೊಳ್ಳಲು ಸೂಚಿಸಲಾಗಿದೆ ಎಂದರು.

ಒಮಿಕ್ರಾನ್ ತೀವ್ರಗತಿಯಲ್ಲಿ ಹರಡುವ ತಳಿಯಾಗಿದ್ದು, ಪರಿಣಾಮ ಹೆಚ್ಚು ತೀವ್ರವಾಗಿರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಆದರೆ, ಸಂರ್ಪತರ ಪತ್ತೆ ಹಾಗೂ ಚಿಕಿತ್ಸೆ ತೀವ್ರಗೊಳಿಸಲು ನಿರ್ದೇಶಿಸಿರುವುದಾಗಿ ತಿಳಿದರು. ಶಾಲೆ ಮತ್ತು ಹಾಸ್ಟೆಲ್ ಕ್ಲಸ್ಟರ್ ಹಾಗೂ ಬೆಂಗಳೂರಿನ ಅಪಾರ್ಟ್ಮೆಂಟ್ ಸಮುಚ್ಚಯ ಕ್ಲಸ್ಟರ್ ಹೀಗೆ ಎರಡು ವಿಧದಲ್ಲಿ ಕ್ಲಸ್ಟರ್ ನಿರ್ವಹಣೆ ಮಾಡಲಾಗುವುದು. ಅಲ್ಲಿರುವವರಿಗೆ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು. ಅಪಾರ್ಟ್​ವೆುಂಟ್​ನಲ್ಲಿ ಜನ ಸೇರುವ ಸಂದರ್ಭದಲ್ಲಿ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಸೇರಬಹುದು. ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರಿಗೆ ತಿಳಿಸಿರುವುದಾಗಿ ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಪೋಷಕರು, ಸಿಬ್ಬಂದಿ ಮತ್ತು ನರ್ಸಿಂಗ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ತಂಗಿರುವ ಹಾಸ್ಟೆಲ್ ಗಳಲ್ಲಿ ಎಲ್ಲರಿಗೂ ಪರೀಕ್ಷೆ ಕಡ್ಡಾಯ ಹಾಗೂ ಎರಡು ಡೋಸ್ ಲಸಿಕೆ ಅಭಿಯಾನ ಕೈಗೊಳ್ಳಬೇಕು. ಕೋ- ಮಾರ್ಬಿಡಿಟಿ ಇದ್ದವರಿಗೆ ಪರೀಕ್ಷೆಯಾಗಬೇಕು. ಎಲ್ಲಿಯೂ ಸಣ್ಣ ಸಂಶಯ ಬರದಂತೆ ವ್ಯವಸ್ಥೆ ಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಮಕ್ಕಳ ಐಸಿಯುಗೆ ಸಿದ್ಧತೆ: ಸಂಭಾವ್ಯ 3ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಐಸಿಯುಗಳ ಸಿದ್ಧತೆಗೆ ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸರ್ಕಾರ ಈಗಾಗಲೇ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಗರದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೋಂಕಿತ ಮಕ್ಕಳ ಆರೈಕೆಗಾಗಿ ಶುಶ್ರೂಷಕರಿಗೂ ಅಗತ್ಯ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.