ನ್ಯೂಸ್

ಒಮಿಕ್ರಾನ್​ ಸೋಂಕು ಹರಡುವಿಕೆ ಡೆಲ್ಟಾಗಿಂತ 3 ಪಟ್ಟು ಅಧಿಕ; ಜಿಲ್ಲಾಮಟ್ಟದಲ್ಲೇ ಜಾಗ್ರತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ನವದೆಹಲಿ: ಒಮಿಕ್ರಾನ್ ಅಪಾಯಕಾರಿಯಲ್ಲ ಎಂದು ಹೇಳಲಾಗುತ್ತಿದ್ದ ಸನ್ನಿವೇಶ ಇದೀಗ ಬದಲಾಗಿದ್ದು, ಒಮಿಕ್ರಾನ್​ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸುವ ಎಚ್ಚರಿಕೆಯ ಸಲಹೆ-ಕಿವಿಮಾತುಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ.

ದಿನೇದಿನೆ ಒಮಿಕ್ರಾನ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಸೋಂಕು ಕಾಣಿಸಿಕೊಂಡಿರುವ ದೇಶಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ರಾಜ್ಯದಲ್ಲೂ ಕಳೆದ ಕೆಲವು ದಿನಗಳಿಂದ ಒಮಿಕ್ರಾನ್​ ತೀವ್ರಗತಿಯಲ್ಲಿ ಹರಡುತ್ತಿದೆ. ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಹರಡುತ್ತಿರುವ ಒಮಿಕ್ರಾನ್​, ನಿನ್ನೆಯಷ್ಟೇ ಉಡುಪಿ ಜಿಲ್ಲೆಗೂ ಪ್ರವೇಶಿಸಿದೆ.

ಇಂದು ಒಮಿಕ್ರಾನ್ ಕುರಿತಂತೆ ಕೇಂದ್ರ ಮತ್ತಷ್ಟು ಎಚ್ಚೆತ್ತಿದ್ದು, ಎಲ್ಲ ರಾಜ್ಯಗಳಿಗೂ ಮುಂಜಾಗ್ರತೆ ವಹಿಸುವಂತೆ ವಿಶೇಷವಾಗಿ ಸೂಚನೆ ನೀಡಿದೆ. ಈ ಹಿಂದೆಯೇ ಕಾಣಿಸಿಕೊಂಡಿರುವ ಕರೊನಾ ರೂಪಾಂತರಿ ವೈರಸ್​ ಡೆಲ್ಟಾಗಿಂತಲೂ ಒಮಿಕ್ರಾನ್ ಮೂರು ಪಟ್ಟು ಹೆಚ್ಚು ಹರಡಬಲ್ಲದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆಯನ್ನು ನೀಡಿದೆ.

ಮಾತ್ರವಲ್ಲ, ಜಿಲ್ಲಾಮಟ್ಟದಲ್ಲೇ ಕೋವಿಡ್/ಒಮಿಕ್ರಾನ್​ ಬಗ್ಗೆ ಹೆಚ್ಚಿನ ಗಮನವಹಿಸಿ. ಅಲ್ಲದೆ, ಪರಿಸ್ಥಿತಿ ಬಿಗಡಾಯಿಸಿದರೆ ಅಗತ್ಯ ಬೀಳುವ ಔಷಧ, ವೈದ್ಯಕೀಯ ಪರಿಕರ, ಆಸ್ಪತ್ರೆ ವ್ಯವಸ್ಥೆ, ಸಿಬ್ಬಂದಿ ಲಭ್ಯತೆ ಎಲ್ಲವುಗಳ ಬಗ್ಗೆ ನಿಗಾ ಇರಿಸಿ ಸೂಕ್ತ ವ್ಯವಸ್ಥೆ ಮಾಡಿಟ್ಟುಕೊಂಡಿರಿ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್​ ಎಲ್ಲ ರಾಜ್ಯಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.

ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ 200 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಜಾಸ್ತಿ ಪ್ರಕರಣಗಳು ಕಂಡುಬಂದಿವೆ.