| ಹರೀಶ್ ಬೇಲೂರು ಬೆಂಗಳೂರು
ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ಗಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ವಿಲೇವಾರಿಗೆ ನಾಲ್ಕು ವರ್ಷದ ಬಳಿಕ ಅನುಮತಿ ಸಿಕ್ಕಿದೆ. 2018ರಲ್ಲಿ ವಿಧಾನಸಭೆ, 2019ರಲ್ಲಿ ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದರಿಂದ ಹಾಗೂ ಕರೊನಾದಿಂದಾಗಿ 4 ವರ್ಷಗಳಿಂದ ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದರಿಂದಾಗಿ ರೇಷನ್ ಕಾರ್ಡ್ ಇಲ್ಲದೆ ಸರ್ಕಾರಿ ಸೌಲಭ್ಯ ಪಡೆಯಲು ಅಭ್ಯರ್ಥಿಗಳು ಪರದಾಡಿದ್ದರು. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳೂ ತೊಂದರೆಗೆ ಒಳಗಾಗಿದ್ದವು. ಇದೀಗ ಬಾಕಿ ಅರ್ಜಿಗಳ ವಿಲೇವಾರಿಗೆ ಡಿ.17ರಂದು ಆಹಾರ ಇಲಾಖೆ ಆದೇಶಿಸಿದೆ. 2017ರಿಂದ 2021 ನ.1ರವರೆಗೆ ಸ್ವೀಕೃತವಾಗಿರುವ ಒಟ್ಟು 4,56,931 ಅರ್ಜಿಗಳ ಪೈಕಿ 2,76,459 ಅರ್ಜಿ ಅರ್ಹವಾದರೆ, 1,80,472 ಅನರ್ಹಗೊಂಡಿವೆ. ಎಪಿಎಲ್ ಕಾರ್ಡ್ಗೆ ಸಲ್ಲಿಕೆಯಾಗಿದ್ದ 1,55,647 ಅರ್ಜಿ ಅರ್ಹವಾಗಿರುವುದರಿಂದ ಇಲಾಖೆ ಈ ಎಲ್ಲ ಅರ್ಜಿಗಳ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ.
ದಾಖಲೆಗಳೇನು?: ರೇಷನ್ ಕಾರ್ಡ್ಗೆ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರ ಕಡ್ಡಾಯವಾಗಿದೆ.
1.80 ಲಕ್ಷ ಅರ್ಜಿಗಳು ಅನರ್ಹ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳ ಶೇ.49.36 ಸೇರಿ ಒಟ್ಟು 3,71,78,287 ಕುಟುಂಬಗಳ ಸದಸ್ಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕಿತ್ತು. ಆದರೆ, ರಾಜ್ಯದಲ್ಲೀಗ ಒಟ್ಟು 3,78,67,521ಕ್ಕೆ ಬಿಪಿಎಲ್ ಸದಸ್ಯರಿದ್ದಾರೆ. ಇದರಲ್ಲಿ 6,89,234 ಹೆಚ್ಚಿನ ಸದಸ್ಯರು ಅಂದರೆ 3.5 ಲಕ್ಷದಷ್ಟು ಹೆಚ್ಚುವರಿ ಬಿಪಿಎಲ್ ಕಾರ್ಡ್ಗಳಿವೆ. ಹಾಗಾಗಿ, ಇಲಾಖೆ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ’ ಎಂಬ ಸೂತ್ರ ಜಾರಿಗೆ ತಂದಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಬಿಪಿಎಲ್ ಕಾರ್ಡ್ಗೆ ಅರ್ಹರೇ ಅಥವಾ ಅನರ್ಹರೇ ಎಂಬುದನ್ನೂ ಪರಿಶೀಲಿಸಿ ವರದಿ ನೀಡಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿತ್ತು. ಇದರಿಂದಾಗಿ ಸರ್ಕಾರ ನಿಗದಿಪಡಿಸಿದ ಮಾನದಂಡ ಆಧಾರದಲ್ಲಿ ಒಟ್ಟು 1,80,472 ಅರ್ಜಿಗಳು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹವಾಗಿವೆ.
2.76 ಲಕ್ಷ ಕಾರ್ಡ್ ರದ್ದು: ಸರ್ಕಾರದ ಮಾನದಂಡ ಉಲ್ಲಂಘಿಸಿ ಆದಾಯ ತೆರಿಗೆ ಪಾವತಿದಾರರು, ಜಿಎಸ್ಟಿ ಮತ್ತು ವೃತ್ತಿ ತೆರಿಗೆ ಪಾವತಿದಾರರು ಸೇರಿ ಆರ್ಥಿಕ ಸಬಲರು ಖೊಟ್ಟಿ ದಾಖಲೆ ನೀಡಿ ಪಡೆದಿದ್ದ 2,76,459 ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ. ಈ ಕಾರ್ಡ್ಗಳಲ್ಲಿ 10,85,935 ಸದಸ್ಯರಿದ್ದರು.
2017-18ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಿದ ನಂತರ ಅದೇ ಕ್ರಮದಲ್ಲಿ ಇತರ ವರ್ಷಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಿರಿತನ ಆಧಾರದಲ್ಲಿ(ಪಿಫೊ) ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. | ಶಮ್ಲಾ ಇಕ್ಬಾಲ್ ಆಯುಕ್ತೆ ಆಹಾರ ಇಲಾಖೆ
ಬಾಕಿ ವಿಲೇವಾರಿ: 2017-18ನೇ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಮೊದಲು ವಿಲೇ ಮಾಡಲು ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ಹೊಸ ರೇಷನ್ ಕಾರ್ಡ್ಗಾಗಿ ಈಗ ಅರ್ಜಿ ಸಲ್ಲಿಸಿರುವ ಅಥವಾ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಸದ್ಯ ಕಾರ್ಡ್ ಸಿಗಲ್ಲ. ಬಾಕಿ ಅರ್ಜಿಗಳ ವಿಲೇ ಮಾಡಿದ ಬಳಿಕವಷ್ಟೇ ಈ ಅರ್ಜಿಗಳ ವಿಲೇವಾರಿಗೆ ಅವಕಾಶ ಸಿಗಲಿದೆ.