ನ್ಯೂಸ್

ಆಕ್ಷೇಪಾರ್ಹ ಪೋಸ್ಟ್ ಮಾಡಿದರೆ ಶಿಕ್ಷೆ ತಪ್ಪದು: ಡಿಲೀಟ್ ಮಾಡಿ ಕ್ಷಮೆ ಯಾಚನೆ ಮಾಡಿದರೂ ಕ್ರಮ ನಿಶ್ಚಿತ

Webdesk - Ravikanth

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಮತ್ತು ಅವಹೇಳನಕಾರಿ ಪೋಸ್ಟ್ ಕುರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಅವಹೇಳನಕಾರಿ ಪೋಸ್ಟ್ ಹಾಕುವವರಿಗೆ ಶಿಕ್ಷೆ ಅಗತ್ಯ ಎಂದು ಹೇಳಿದೆ. ಆರೋಪಿಗಳು ಕ್ಷಮೆಯಾಚಿಸಿ ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮ ಪೋಸ್ಟ್​ಗಳಿಗೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ. ತಮಿಳು ನಟ, ಮಾಜಿ ಶಾಸಕ ಎಸ್.ವಿ. ಶೇಖರ್ (72) ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ. ಪತ್ರಕರ್ತೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?: ಪತ್ರಕರ್ತೆಯನ್ನು ಗುರಿಯಾಗಿಸಿಕೊಂಡು 2018ರಲ್ಲಿ ಶೇಖರ್ ಫೇಸ್​ಬುಕ್​ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಪತ್ರಕರ್ತೆ ಅಂದಿನ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಅಸಭ್ಯವಾಗಿ ಆರೋಪ ಮಾಡಿದ್ದರು. ಈ ಬಗ್ಗೆ ಶೇಖರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಪೋಸ್ಟ್ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಡಿಎಂಕೆ ನಾಯಕರು ಶೇಖರ್ ರಾಜೀನಾಮೆಗೆ ಒತ್ತಾಯಿಸಿದ್ದರು. ಆಗ ಅವರು ಕ್ಷಮೆಯಾಚಿಸಿ ಪೋಸ್ಟ್ ಹಿಂತೆಗೆದುಕೊಂಡಿದ್ದರು.

ವಕೀಲರು ಹೇಳಿದ್ದೇನು?: ತಪ್ಪು ಅರಿತು ಶೇಖರ್ ಪೋಸ್ಟ್ ತೆಗೆದು ಬೇಷರತ್ ಕ್ಷಮೆಯಾಚಿಸಿದ್ದಾರೆ. ಕಣ್ಣಿಗೆ ಔಷಧ ಹಾಕಿದ್ದರಿಂದ ದೃಷ್ಟಿ ತುಸು ಮಂಜಾಗಿತ್ತು. ಹೀಗಾಗಿ ಪೋಸ್ಟ್​ನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ನೋಡಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದರು.

ಸುಪ್ರೀಂಕೋರ್ಟ್ ಅತೃಪ್ತಿ: ಅತ್ಯಾಚಾರ ಸಂತ್ರಸ್ತೆಯ 26 ವಾರಗಳ ಭ್ರೂಣ ತೆಗೆಸುವ ಕುರಿತ ಅರ್ಜಿ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಮುಂದೂಡಿರುವುದಕ್ಕೆ ಸುಪ್ರೀಂ ಕೋರ್ಟ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿದೆ. ಅಮೂಲ್ಯವಾದ ಸಮಯ ಈಗ ಕಳೆದುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳಲ್ಲಿ ತುರ್ತು ಪ್ರಜ್ಞೆ ಇರಬೇಕು. ಈ ವಿಷಯವನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸಿ ಮುಂದೂಡುವ ಮನೋಭಾವ ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿದೆ. 25 ವರ್ಷ ವಯಸ್ಸಿನ ಸಂತ್ರಸ್ತ ಮಹಿಳೆ ಆಗಸ್ಟ್ 7ರಂದು ಗುಜರಾತ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮರುದಿನ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು. ಗರ್ಭಾವಸ್ಥೆಯ ಸ್ಥಿತಿ ಮತ್ತು ಅರ್ಜಿದಾರರ ಆರೋಗ್ಯ ಸ್ಥಿತಿ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಮಂಡಳಿ ರಚನೆಗೆ ಹೈಕೋರ್ಟ್ ಆಗಸ್ಟ್ 8ರಂದು ನಿರ್ದೇಶನ ನೀಡಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯಕೀಯ ಕಾಲೇಜು ಆಗಸ್ಟ್ 10ರಂದು ವರದಿ ಸಲ್ಲಿಸಿತ್ತು. ಆದರೆ ಈ ಪ್ರಕರಣವನ್ನು 12 ದಿನಗಳ ನಂತರ ಅಂದರೆ ಆಗಸ್ಟ್ 23ಕ್ಕೆ ಪಟ್ಟಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ಸಂತ್ರಸ್ತೆ ಪರ ವಕೀಲರು ತಿಳಿಸಿದ್ದಾರೆ. ಈ ಬಗ್ಗೆ ಕೋರ್ಟ್ ರಾಜ್ಯ ಸರ್ಕಾರ ಮತ್ತು ಅರ್ಜಿಯ ಸಂಬಂಧಿತ ಸಂಸ್ಥೆಗಳಿಂದ ಪ್ರತಿಕ್ರಿಯೆ ಕೇಳಿದೆ. ಸಂತ್ರಸ್ತೆ 27 ವಾರದ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ 28ನೇ ವಾರ ಸಮೀಪಿಸುತ್ತಿದೆ. ಹೀಗಾಗಿ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದು ವಕೀಲರು ಕೋರ್ಟ್​ಗೆ ಮನವಿ ಮಾಡಿದ್ದಾರೆ. ಸಂತ್ರಸ್ತೆ ಆರೋಗ್ಯ ಬಗ್ಗೆ ಶೀಘ್ರ ವರದಿ ಸಲ್ಲಿಸಿ ಎಂದು ವೈದ್ಯಕೀಯ ಮಂಡಳಿಗೆ ಪೀಠ ಸೂಚಿಸಿದೆ.