ಒಡಿಶಾ: ಇಲ್ಲಿನ ಬಾಲಸೋರ್ನಲ್ಲಿ ಶುಕ್ರವಾರ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಒಡಿಶಾ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಮೂಲಕ ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವನ್ನೂ ಮಟ್ಟಹಾಕಲು ಮುಂದಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟ್ಗಳ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸರು ಈ ಎಚ್ಚರಿಕೆ ನೀಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಅಂದಹಾಗೆ ಕೆಲವರು ಈ ಅಪಘಾತಕ್ಕೆ 'ಕೋಮು' ಬಣ್ಣ ಬಳಿಯಲು ಮುಂದಾಗಿದ್ದೇ ಪೊಲೀಸರು ಇಂಥದ್ದೊಂದು ಎಚ್ಚರಿಕೆ ನೀಡಲು ಕಾರಣ.
ಬಾಲಸೋರ್ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತಕ್ಕೆ ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಕಿಡಿಗೇಡಿತನದಿಂದ ಕೋಮು ಬಣ್ಣ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲಾ ಅಂಶಗಳ ಬಗ್ಗೆ ಒಡಿಶಾದ ಜಿಆರ್ಪಿ ತನಿಖೆ ನಡೆಯುತ್ತಿದೆ. ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್ಗಳನ್ನು ಪ್ರಸಾರ ಮಾಡದಂತೆ ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮುಸಾಮರಸ್ಯ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.